ಬೆಂಗಳೂರು: ಮಾಜಿ ಸಚಿವ ವರ್ತೂರು ಪ್ರಕಾಶ್ ಆಪ್ತೆ ಎಂದು ಹೇಳಿಕೊಂಡು ಚಿನ್ನಾಭರಣ ಅಂಗಡಿ ಮಾಲೀಕರಿಗೆ ವಂಚಿಸಿ ಸಧ್ಯ ಜೈಲಿನಲ್ಲಿರುವ ಬಂಧನಕ್ಕೊಳಗಾಗಿರುವ ಶ್ವೇತಾ ಗೌಡ ವಿರುದ್ಧ ಮತ್ತೊಂದು ವಂಚನೆ ಪ್ರಕರಣ ದಾಖಲಾಗಿದೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಸುಭಾಶ್ ನಗರದ ಪ್ರಗತಿ ಜ್ಯೂಯಲರ್ಸ್ ಮಾಲೀಕ ಬಾಲರಾಜ್ ಸೇಟ್ ಅವರು ಶ್ವೇತಾಗೌಡ ವಿರುದ್ಧ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಬೆಂಗಳೂರಿನ ಜ್ಯೂಯಲ್ಲರಿ ಶಾಪ್ ಮಾಲೀಕ ಸಂಜಯ್ ಬಾಫ್ನಾ ಅವರ ಮೂಲಕ ಶ್ವೇತಾಗೌಡ 6 ತಿಂಗಳ ಹಿಂದೆ ಪರಿಚಯವಾಗಿದ್ದರು. ತಾನು ಸಂಜಯ್ ಅವರ ಬಳಿ ಕೋಟ್ಯಂತರ ರೂ. ವ್ಯವಹಾರ ಮಾಡುತ್ತಿದ್ದೇನೆ. ಹಳೆಯ ಆಂಟಿಕ್ ಚಿನ್ನಾಭರಣ ಮತ್ತು ವಜ್ರದ ಆಭರಣಗಳನ್ನು ಖರೀದಿ ಮಾಡುವುದಾಗಿ ಹೇಳಿ 250 ಗ್ರಾಂ ತೂಕದ ಆಂಟಿಕ್ ಆಭರಣಗಳನ್ನು ತಯಾರಿಸಿಕೊಡುವಂತೆ ಆರ್ಡರ್ ನೀಡಿದ್ದಳು. ಅದರಂತೆ ಆಭರಣ ಮಾಡಿಕೊಟ್ಟಿದ್ದು ಈಗ ಹಣ ನೀಡದೆ ವಂಚಿಸಿದ್ದಾಳೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಡಿಸೆಂಬರ್ 11 ರಂದು 285 ಗ್ರಾಂ ತೂಕದ ಆಂಟಿಕ್ ಆಭರಣಗಳನ್ನು ಶ್ವೇತಾ ಅವರಿಗೆ ಮಾರಾಟ ಮಾಡಲು ಬೆಂಗಳೂರಿಗೆ ನನ್ನ ಸಹೋದರನನ್ನು ಕಳುಹಿಸಿದ್ದೆ. ನನ್ನ ಸಹೋದರನನ್ನು ಯುಬಿ ಸಿಟಿ ಬಳಿಯ ಕಾಫಿ ಡೇ ನಲ್ಲಿ ಭೇಟಿ ಮಾಡಿದ್ದ ಶ್ವೇತಾಗೌಡ, ಆಂಟಿಕ್ ಆಭರಣಗಳನ್ನು ಖರೀದಿಸಿದ್ದರು. 5 ಲಕ್ಷದ ಎರಡು ಚೆಕ್ ಮತ್ತು 6 ಲಕ್ಷದ ಒಂದು ಚೆಕ್ ನೀಡಿ ಉಳಿದ 4.75 ಲಕ್ಷ ರೂ. ಹಣವನ್ನು ಆರ್ ಟಿಜಿಎಸ್ ಮಾಡುವುದಾಗಿ ಭರವಸೆ ನೀಡಿದ್ದರು. ಆಕೆ ಹೇಳಿದಂತೆ ಚೆಕ್ ಗಳನ್ನು ಡಿ.13ರಂದು ಬ್ಯಾಂಕ್ ನಲ್ಲಿ ಹಾಜರುಮಾಡಿದಾಗ ಬೌನ್ಸ್ ಆಗಿದ್ದವು. ಇತ್ತ ಬಾಕಿ ಮೊತ್ತವನ್ನೂ ಆರ್ ಟಿ ಜಿಎಸ್ ಮಾಡಿರಲಿಲ್ಲ. ಈ ಸಂಬಂಧ ಆಕೆಯನ್ನು ಸಂಪರ್ಕಿಸಿದಾಗ ಬ್ಯಾಂಕ್ ನಲ್ಲಿ ಸಮಸ್ಯೆ ಉಂಟಾಗಿದೆ ಎಂದು ಸಮಜಾಯಿಷಿ ನೀಡಿದ್ದಳು. ನಂತರ ವಿಚಾರಿಸಿದಾಗ ಶ್ವೇತಾಗೌಡ ಬಂಧನವಾಗಿರುವುದು ತಿಳಿದು ಬಂದಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.