ಸಂಧಾನ ಸಕ್ಸಸ್;‌ ಡಿ.31ರಿಂದ ನಡೆಯಬೇಕಿದ್ದ ಕೆ ಎಸ್‌ ಆರ್‌ ಟಿಸಿ ನೌಕರರ ಅನಿರ್ಧಿಷ್ಟಾವಧಿ ಮುಷ್ಕರ ವಾಪಸ್

Most read

ಬೆಂಗಳೂರು: ಬಾಕಿ ಮೊತ್ತ ಬಿಡುಗಡೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆ ಎಸ್‌ ಆರ್‌ ಟಿಸಿ) ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ, ಡಿ.31ರಂದು ಕರೆ ನೀಡಿದ್ದ ಸಾರಿಗೆ ಮುಷ್ಕರವನ್ನು ಹಿಂಪಡೆದಿದೆ.

ಭಾನುವಾರ ರಾತ್ರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸ ಕಾವೇರಿಯಲ್ಲಿ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳ ಜತೆ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಂಧಾನ ಸಭೆ ನಡೆಸಿದ್ದರು. ಸಾರಿಗೆ ನೌಕರರ ಸಮಸ್ಯೆಗಳನ್ನು ಈಡೇರಿಸುವ ಭರವಸೆ ಸಿಕ್ಕಿದ್ದು, ಡಿಸೆಂಬರ್‌ 31ರಿಂದ ನಡೆಯಬೇಕಿದ್ದ ಅನಿರ್ಧಿಷ್ಟಾವಧಿ ಮುಷ್ಕರವನ್ನು ಹಿಂಪಡೆಯಲಾಗಿದೆ. ಈ ಸಂಬಂಧ ಜನವರಿ 15ರಂದು ಮುಖ್ಯಮಂತ್ರಿಗಳು ಮತ್ತೊಮ್ಮೆ ಪದಾಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ ಎಂದು ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ.

 ಸಭೆಯಲ್ಲಿ ಸಾರಿಗೆ ಸಚಿವರು, ಇಲಾಖೆಯು ನಾಲ್ಕೂ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು ಮತ್ತು ಅಧಿಕಾರಿಗಳು ಭಾಗಿಯಾಗಿದ್ದರು. ನೌಕರರ ಸಮಸ್ಯೆ ಅಲಿಸಿದ ಮುಖ್ಯಮಂತ್ರಿಗಳು ಜನವರಿ 15 ರಂದು ಮತ್ತೊಂದು ಸುತ್ತಿನ ಸಭೆ ಮಾಡುವುದಾಗಿ ಭರವಸೆ ನೀಡಿದ್ದಾರೆ. ಅವರ ಮನವಿಗೆ ಸ್ಪಂದಿಸಿ ಮುಷ್ಕರ ಹಿಂಪಡೆಯಲಾಗಿದೆ ಎಂದು ಕೆ ಎಸ್‌ ಆರ್‌ ಟಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಎಚ್.ವಿ. ಅನಂತಸುಬ್ಬರಾವ್‌ ತಿಳಿಸಿದ್ದಾರೆ.

ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯಿಸಿ, ಸಾರಿಗೆ ನೌಕರರ ಕಲ್ಯಾಣಕ್ಕಾಗಿ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ. ಮೂಲಭೂತ ಸೌಕರ್ಯಗಳ ವಿಸ್ತರಣೆ, ಅಪಘಾತ ವಿಮೆ, ಆರೋಗ್ಯ ಯೋಜನೆ ಮತ್ತು ತ್ವರಿತವಾಗಿ 9000 ಉದ್ಯೋಗಿಗಳ ನೇಮಕಾತಿಗೆ ಸರ್ಕಾರ ಕ್ರಮ ಕೈಗೊಂಡಿದೆ ಎಂದರು.

ಸಮಿತಿಯು ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ನೌಕರರ ವೇತನ ಪರಿಷ್ಕರಣೆ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಡಿ.31 ರಿಂದ ರಾಜ್ಯದಾದ್ಯಂತ ಅನಿರ್ಧಿಷ್ಟಾವಧಿ ಮುಷ್ಕರ ಹಮ್ಮಿಕೊಂಡಿತ್ತು.

ಸಾರಿಗೆ ನೌಕರರು ಪ್ರತಿದಿನ ಸುಮಾರು ಒಂದು ಕೋಟಿಗೂ ಹೆಚ್ಚಿನ ಪ್ರಯಾಣಿಕರನ್ನು ರಾಜ್ಯದ ವಿವಿಧ ಭಾಗಗಳಿಗೆ ಸುರಕ್ಷಿತವಾಗಿ ತಲುಪಿಸುತ್ತಿದ್ದಾರೆ. ಶಕ್ತಿ ಯೋಜನೆಯನ್ನು ಸಮರ್ಥವಾಗಿ ಅನುಷ್ಠಾನಗೊಳಿಸುವ ಮೂಲಕ ಸರ್ಕಾರಕ್ಕೆ ಒಳ್ಳೆಯ ಹೆಸರು ತಂದುಕೊಟ್ಟಿದ್ದಾರೆ. ನಾಲ್ಕೂ ಸಾರಿಗೆ ನಿಗಮಗಳ ಒಂದು ಲಕ್ಷಕ್ಕೂ ಅಧಿಕ ನೌಕರರ ಬೇಡಿಕೆಗಳ ಬಗ್ಗೆ ಸರ್ಕಾರ ನಿರ್ಲಕ್ಷ್ಯ ಧೋರಣೆ ತಳೆದಿರುವುದನ್ನು ಖಂಡಿಸಿ ಮುಷ್ಕರ ಕೈಗೊಳ್ಳಲಾಗುತ್ತಿದೆ ಎಂದು ಪದಾಧಿಕಾರಿಗಳು ತಿಳಿಸಿದ್ದರು.

ಸಾರಿಗೆ ನೌಕರರ ಬೇಡಿಕೆಗಳು:

38 ತಿಂಗಳಿನಿಂದ ಬಾಕಿ ಉಳಿಸಿಕೊಂಡಿರುವ ಹಣವನ್ನು ಕೂಡಲೇ ಪಾವತಿಸಬೇಕು. ಶಕ್ತಿ ಯೋಜನೆಯ ಸಂಪೂರ್ಣ ಅನುದಾನವನ್ನು ಸಾರಿಗೆ ನಿಗಮಗಳಿಗೆ ತಡಮಾಡದೆ ಪಾವತಿಸಬೇಕು. ನೌಕರರು ಪ್ರಸ್ತುತ ಪಡೆಯುತ್ತಿರುವ ವಿವಿಧ ಭತ್ಯೆಗಳನ್ನು ಐದು ಪಟ್ಟು ಹೆಚ್ಚಳ ಮಾಡಬೇಕು. ಎಲ್ಲ ನೌಕರರಿಗೆ ಪ್ರತಿ ತಿಂಗಳೂ ಹೊರ ರೋಗಿ ಚಿಕಿತ್ಸೆ ವೆಚ್ಚಕ್ಕಾಗಿ ರೂ. 2 ಸಾವಿರ ಭತ್ಯೆ ನೀಡಬೇಕು ಮತ್ತು ಉಚಿತವಾಗಿ ಔಷಧ ಪೂರೈಸಬೇಕು. ಇ.ಎಸ್‌.ಐ ಮಾದರಿಯಲ್ಲಿ ಮಲ್ಪಿ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡಬೇಕು. ಗುತ್ತಿಗೆ ಆಧಾರದಲ್ಲಿ ತೆಕೆಲಸ ಮಾಡುತ್ತಿರುವ ಚಾಲಕ ಮತ್ತು ತಾಂತ್ರಿಕ ಸಿಬ್ಬಂದಿಯನ್ನು ಕಾಯಂಗೊಳಿಸಬೇಕು. ಸಿಬ್ಬಂದಿ ನೇಮಕಾತಿಯನ್ನು ಆರಂಭಿಸಬೇಕು. ನೌಕರರ ಮುಂಬಡ್ತಿಗೆ ಕ್ರಮ ತೆಗೆದುಕೊಳ್ಳಬೇಕು ಎನ್ನುವುದು ಇವರ ಪ್ರಮುಖ ಬೇಡಿಕೆಗಳಾಗಿವೆ.

More articles

Latest article