ಧಾರವಾಡ: ಧಾರವಾಡ ಜಿಲ್ಲೆಯ ಅಳ್ನಾವರ ತಾಲೂಕಿನ ಕಡಬಗಟ್ಟಿ ಬಳಿಯ ಧಾರವಾಡ-ಅಳ್ನಾವರ-ಗೋವಾ ಹೆದ್ದಾರಿಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ ಮೂವರು ಮೃತಪಟ್ಟಿದ್ದಾರೆ. ಐಶರ್ ವಾಹನದಲ್ಲಿದ್ದ ಶಿರಸಂಗಿಯ ಹನುಮಂತಪ್ಪ ಮಲ್ಲಾಡ (45), ಮಹಾಂತೇಶ್ ಚವ್ಹಾಣ್ (40), ಮಹದೇವ ಹಾಲೊಳ್ಳಿ (40) ಮೃತ ದುರ್ದೈವಿಗಳು. ಐವರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಇವರು ಐಶರ್ ವಾಹನದಲ್ಲಿ ಮೇವಿನ ಹೊಟ್ಟು ತುಂಬಿಕೊಂಡು ಗೋವಾದ ಕಡೆಗೆ ಹೊರಟಿದ್ದರು. ಗೋವಾದಲ್ಲಿ ಮೇವಿನ ಹೊಟ್ಟಿಗೆ ಹೆಚ್ಚಿನ ಬೇಡಿಕೆ ಇರುವ ಹಿನ್ನೆಲೆಯಲ್ಲಿ ಮಾರಾಟ ಮಾರಲು ಗೋವಾಗೆ ತೆರಳುತ್ತಿದ್ದರು ಎಂದು ತಿಳಿದು ಬಂದಿದೆ. ಚಿತ್ರದುರ್ಗದ ಕಡೆಯೊಂದ ಬರುತ್ತಿದ್ದ ಟಿಟಿ ವಾಹನ ಐಶರ್ ಗೆ ಮುಖಾಮುಖಿ ಡಿಕ್ಕಿಯಾಗಿ ಈ ಅಫಘಾತ ಸಂಭವಿಸಿದೆ. ಅಳ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತೊಂದು ಅಪಘಾತ ಪ್ರಕರಣದಲ್ಲಿ ಶಿವಮೊಗ್ಗ ನಗರದ ಸರ್ಕ್ಯೂಟ್ ಹೌಸ್ ಸರ್ಕಲ್ನಲ್ಲಿ ತಡರಾತ್ರಿ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಯುವಕರ ಮೃತಪಟ್ಟಿದ್ದಾರೆ. ಬಸ್ ಹಾಗೂ ಬೈಕ್ ನಡುವೆ ಈ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಓರ್ವ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊಬ್ಬನನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಅಸು ನೀಗಿದ್ದಾನೆ. ಮೃತ ಯುವಕರ ಗುರುತು ಪತ್ತೆಯಾಗಿಲ್ಲ. ಶಿವಮೊಗ್ಗ ಪೂರ್ವ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.