ಛತ್ತೀಸ್ಗಢ: ದೇಶದಲ್ಲಿ ತಾಳಿ ಕಟ್ಟಿ ಸಪ್ತಪದಿ ತುಳಿಯುವ ಮೂಲಕ ಶಾಸ್ತ್ರೋಕ್ತವಾಗಿ ಮದುವೆಗಳು ನಡೆಯುವುದು ಸಹಜ. ಇನ್ನೂ ಕೆಲವರು ಆಡಂಬರ ಇಲ್ಲದೆ ಮಂತ್ರಮಾಂಗಲ್ಯ ಅಥವಾ ಸರಳ ವಿವಾಹದ ಮೂಲಕ ವಿವಾಹವಾಗಿ ಸಮಾಜಕ್ಕೆ ಮಾದರಿಯಾಗುತ್ತಾರೆ. ಆದರೆ ಇಲ್ಲೊಂದು ಜೋಡಿ ಸಂವಿಧಾನದ ಮೇಲೆ ಪ್ರಮಾಣ ಮಾಡುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಶಾಸ್ತ್ರ ಸಂಪ್ರದಾಯಗಳನ್ನೆಲ್ಲಾ ಬದಿಗಿಟ್ಟು ಡಾ. ಅಂಬೇಡ್ಕರ್ ಅವರ ಭಾವಚಿತ್ರದ ಮುಂದೆ ಸಂವಿಧಾನದ ಮೇಲೆ ಪ್ರಮಾಣ ಮಾಡುವ ಮೂಲಕ ಆದರ್ಶ ಮೆರೆದಿದ್ದಾರೆ. ಈ ವಿನೂತನ ಮತ್ತು ಅನುಕರಣೀಯವಿವಾಹದ ವಿಡಿಯೋ ವೈರಲ್ ಆಗುತ್ತಿದ್ದು ಮೆಚ್ಚುಗೆಗೆ ಪಾತ್ರವಾಗಿದೆ.
ಛತ್ತೀಸ್ಗಢದ ಕಾಪು ಗ್ರಾಮದ ವದು ವರರು ಸಂವಿಧಾನದ ಮೇಲೆ ಪ್ರಮಾಣ ಮಾಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಮೂಲಕ ವರ ಎಮಾನ್ ಲಾಹ್ರೆ ಮತ್ತು ವಧು ಪ್ರತಿಮಾ ಲಾಹ್ರೆ ಅದ್ದೂರಿ ವೆಚ್ಚಗಳಿಗಳೂ ಕಡಿವಾಣ ಹಾಕಿದ್ದಾರೆ.
ಹಣೆಗೆ ಸಿಂಧೂರ ಇಡುವ ಅಥವಾ ತಾಳಿ ಕಟ್ಟುವಂತಹ ಪದ್ಧತಿಗಳನ್ನು ಕೈ ಬಿಟ್ಟು ಜೀವನ ಪರ್ಯಂತ ನಾವು ಒಬ್ಬರನ್ನೊಬ್ಬರು ಪರಸ್ಪರ ಬೆಂಬಲಿಸುತ್ತಾ ಜೊತೆಯಾಗಿರುತ್ತೇವೆ ಎಂದು ಸಂವಿಧಾನದ ಮೇಲೆ ಪ್ರಮಾಣ ಮಾಡಿ, ಡಾ. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಅಂತಿಮವಾಗಿ ಪ್ರದಕ್ಷಿಣೆ ಹಾಕುವ ಮೂಲಕ ವಿಶಿಷ್ಟ ರೀತಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಜೋಡಿಗೆ ನಾವೂ ಶುಭ ಹಾರೈಸೋಣ