ನಾವು ಧರ್ಮ, ಭಾಷೆ, ಜಾತಿಯ ಆಧಾರದಲ್ಲಿ (ಜ್ಞಾನವಿರಲಿ, ಅಧಿಕಾರವಿರಲಿ) ವ್ಯವಸ್ಥೆಯನ್ನು ನಡೆಸಲು ನಿರ್ಧರಿಸಿದರೆ ಅದರಿಂದ ಉಂಟಾಗುವ ಸಾಮಾಜಿಕ ಒತ್ತಡ, ಆರ್ಥಿಕ ಅಸಮಾನತೆ ಮತ್ತು ರಾಜಕೀಯ ಸಂಘರ್ಷ ಇಡೀ ಸಮುದಾಯದ ಶಾಂತಿಯನ್ನು ಅಪಾಯದಲ್ಲಿಡುತ್ತದೆ – ಡಾ.ಉದಯ ಕುಮಾರ ಇರ್ವತ್ತೂರು.
ಅಮೇರಿಕಾ – ರಷ್ಯಾ ನಡುವಿನ ಶೀತಲ ಯುದ್ಧದ ಸಂದರ್ಭದಲ್ಲಿ ಒಬ್ಬರನ್ನೊಬ್ಬರು ಸೋಲಿಸಲು, ಸದೆ ಬಡಿಯಲು, ಹತೋಟಿಯಲ್ಲಿಡಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿರುವ ಹೊತ್ತಲ್ಲಿ ನಡೆದಿದೆ ಎನ್ನಲಾದ ಪ್ರಸಂಗವಿದು ಎಂದು ಕೇಳಿಪಟ್ಟದ್ದು. ಇದು ಎಷ್ಟು ನಿಜವೋ ಸುಳ್ಳೋ ಗೊತ್ತಿಲ್ಲ. ಏನು ಮಾಡಿದರೂ ಸಮಾಜವಾದಿ ನಿಲುವಿನ ರಷ್ಯಾವನ್ನು ಸದೆಬಡಿಯಬೇಕಿದ್ದರೆ ಅವರ ಶಿಕ್ಷಣ ಬದ್ಧತೆಯನ್ನು ಕಲುಷಿತಗೊಳಿಸುವುದು ಬಹಳ ಅಗತ್ಯ ಎಂದು ಬೇಹುಗಾರಿಕಾ ವಿಭಾಗ ಅಮೇರಿಕದ ಆಡಳಿತಕ್ಕೆ ಸಲಹೆ ನೀಡಿತಂತೆ. ರಷ್ಯಾದ ಜನರ ವ್ಯಕ್ತಿತ್ವ ರೂಪಿಸುವುದರಲ್ಲಿ ಅವರ ಶಿಕ್ಷಣದ ಪಾತ್ರ ಬಹಳ ಪ್ರಮುಖ ಪಾತ್ರ ವಹಿಸುತ್ತಿದೆ, ಆದ್ದರಿಂದ ಅದನ್ನು ಶಿಥಿಲಗೊಳಿಸಿದರೆ, ನಿಧಾನವಾಗಿ ಇಡೀ ಸಮುದಾಯದ ಸಮಾಜದ ಆತ್ಮವಿಶ್ವಾಸ ಕುಂದಿಸಬಹುದು ಎನ್ನುವುದೇ ಅಂತಹ ಸಲಹೆಯ ಹಿಂದಿನ ಕಾರಣವಾಗಿತ್ತು ಎಂದು ನಂಬಲಾಗಿತ್ತು. ಬೇಹುಗಾರಿಕಾ ಸಂಸ್ಥೆಗಳು ನೀಡಿದ ಸಲಹೆಯಂತೆ ಮುಂದಿನ ಯೋಜನೆ ಸಿದ್ಧಪಡಿಸಲಾಯಿತು ಎನ್ನಲಾಗಿದೆ. ಇದು ಅಂತೆ, ಕಂತೆಯೇ ಆಗಿರಬಹುದಾದರೂ ಇದರಲ್ಲಡಗಿರುವ ಸಂದೇಶ ಮಾತ್ರ ನಿರಾಕರಿಸಿ ಬಿಡುವಂತಹುದಲ್ಲ.
ನಮ್ಮ ಪಾರಂಪರಿಕ ಸಮಾಜದಲ್ಲಿ ಇದ್ದ ಗುರುಕುಲ ಶಿಕ್ಷಣ ಪದ್ಧತಿ ಮತ್ತು ಅಂದಿದ್ದ ಸಮಾಜಕ್ಕೂ ಬಹಳ ಹತ್ತಿರದ ನಂಟಿದೆ ಎನ್ನುವುದನ್ನು ಕಡೆಗಣಿಸಲಾಗದು. ಬ್ರಿಟೀಷರು ಬಂದು ಅವರ ಅನುಕೂಲಕ್ಕೆ ತಕ್ಕುದಾದ ಶಿಕ್ಷಣವನ್ನು ನೀಡಿದರು ಎನ್ನುವುದು ನಿಜವೇ ಆದರೂ ‘ಮೆಕಾಲೆಯ’ ಬಗೆಗಿನ ಕಥನವೂ ಪೂರ್ಣ ಸತ್ಯವಲ್ಲ. ಜ್ಞಾನದ ಜ್ಯೋತಿ ಹಚ್ಚಿದ ಮೇಲೆ ಹರಡುವ ಬೆಳಕನ್ನು ಸಂಪೂರ್ಣವಾಗಿ ಯಾರಿಂದಲೂ ನಿಯಂತ್ರಿಸಲಾಗದು. ಪಠ್ಯಕ್ರಮ, ಬೋಧನಾ ವಿನ್ಯಾಸ, ಅದರ ಪರಿಣಾಮ, ಕಲಿಕೆಯ ಮೌಲ್ಯಮಾಪನ ಇವೆಲ್ಲವೂ ಒಂದು ನಿರ್ಧರಿತ ನಿಯಮದಂತೆ ನಡೆದರೂ, ಅದನ್ನು ಮೀರಿ ಮನುಷ್ಯನ ವಿವೇಕ ಬೆಳೆಯಬಲ್ಲದು ಮತ್ತು ಹೊಳೆಯಬಲ್ಲದು ಎನ್ನುವುದೂ ಸತ್ಯ. ಇದರ ಜೊತೆ ಜೊತೆಗೇನೇ ಆಡಳಿತ ವ್ಯವಸ್ಥೆಗೆ ಪೂರಕವಾಗಿ ಅಥವಾ ಮಾನವ ಸಂಪನ್ಮೂಲ ಒದಗಿಸುವ ಜವಾಬ್ದಾರಿಯನ್ನು ನಿರ್ವಹಿಸುವ ವಿನ್ಯಾಸವಾಗಿ ಶಿಕ್ಷಣ ವ್ಯವಸ್ಥೆಯನ್ನು ಅಣಿಗೊಳಿಸುವ ಪ್ರಯತ್ನವಂತೂ ಪ್ರಭುತ್ವದಿಂದ ಪ್ರಜ್ಞಾಪೂರ್ವಕವಾಗಿ ನಡೆಯುತ್ತಿರುವುದಂತೂ ಸತ್ಯವೇ.
ಯುರೋಪಿನ ಸಾಮ್ರಾಜ್ಯಶಾಹೀ ಶಕ್ತಿಗಳ ವಸಾಹತುಗಳಾಗಿದ್ದ ದೇಶಗಳು ಸ್ವಾತಂತ್ರ್ಯ ಪಡೆದ ನಂತರ ರೂಪಿಸಿದ ಶಿಕ್ಷಣ ವ್ಯವಸ್ಥೆ ಕೂಡಾ ಕಾಲದಿಂದ ಕಾಲಕ್ಕೆ ಬದಲಾಗುತ್ತಾ ಬಂದಿರುವುದನ್ನು ನಾವು ಗಮನಿಸಬಹುದಾಗಿದೆ. ಆರಂಭದ ದಿನಗಳಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸುವ ರೀತಿಯ ಶಿಕ್ಷಣಕ್ಕೆ ಒತ್ತು ಕೊಟ್ಟಿರುವ ಕಾರಣದಿಂದ ಜನರಲ್ಲಿ ಯೋಚಿಸುವ, ಪ್ರಶ್ನಿಸುವ ಮನೋಭಾವನೆ ಬೆಳೆಯಿತು. ಸಾಮಾಜಿಕವಾಗಿ, ರಾಜಕೀಯವಾಗಿ ಜನ ತಮ್ಮ ಸ್ಥಿತಿಗತಿಗಳಿಗೆ ಕಾರಣವಾದ ವಿಚಾರಗಳ ಬಗ್ಗೆ ಹೆಚ್ಚು ಆಲೋಚಿಸ ತೊಡಗಿದರು. ಇಂತಹ ಮನೋಭಾವನೆಯನ್ನು ಶಿಕ್ಷಣ ವ್ಯವಸ್ಥೆ ಬೆಳೆಸಿರುವ ಕಾರಣದಿಂದ ವಿವಿಧ ರೀತಿಯ ಜನಪರ ಚಳುವಳಿಗಳು ಹುಟ್ಟಿಕೊಂಡವು. ಇಂತಹ ಚಳುವಳಿಯ ಕಾರಣದಿಂದಾಗಿ ರೈತರ, ಶೋಷಿತರ, ಮಹಿಳೆಯರ, ದಲಿತರ, ಧ್ವನಿಗಳು ಉಳಿದವರಿಗೆ ತಲುಪಲು ಕಾರಣವಾಯಿತು. ಅಧಿಕಾರದ ಮೊಗಸಾಲೆಗಳಲ್ಲಿ ಅದುವರೆಗೂ ಕೇಳಿಸದ ಇಂತಹ ಧ್ವನಿಗಳು ಕೇಳಿ ಬರತೊಡಗಿದ ಕಾರಣ ಶಾಸನ ಸಭೆಗಳಲ್ಲಿ ಮಹತ್ವದ ವಿಷಯಗಳು ಚರ್ಚಿಸಲ್ಪಟ್ಟವು. ಜನಪರವಾದಂತಹ ಕಾನೂನುಗಳು ರಚನೆಗೊಂಡವು. ಇದು ಒಂದು ರೀತಿಯಲ್ಲಿ ಹೊಸ ಭರವಸೆಯನ್ನು ಮೂಡಿಸಲು ಕಾರಣವಾದವು ಎಂದೇ ಹೇಳಬಹುದು. ಅನುಷ್ಠಾನದಲ್ಲಿ ಇನ್ನಷ್ಟು ಪರಿಣಾಮಕಾರಿ ಆಗಬಹುದಿತ್ತು ಎನ್ನುವ ಆರೋಪದ ಹೊರತಾಗಿಯೂ ಜನ ಭರವಸೆ ಕಳೆದುಕೊಳ್ಳುವ ವಾತಾವರಣವಂತೂ ಇರಲಿಲ್ಲ.
ಎಪ್ಪತ್ತರ ದಶಕದಲ್ಲಿ ದೇಶದ ಪ್ರಧಾನಮಂತ್ರಿಯಾಗಿದ್ದ ಶ್ರೀಮತಿ ಇಂದಿರಾಗಾಂಧಿಯವರು ತುರ್ತು ಪರಿಸ್ಥಿತಿ ಘೋಷಿಸಿದರೂ ಅದನ್ನು ಸುದೀರ್ಘಕಾಲ ನಿಭಾಯಿಸಲು ಆಕೆಗೆ ಸಾಧ್ಯವಾಗದೇ ಹೋಯಿತು. ತುರ್ತು ಪರಿಸ್ಥಿತಿಯಲ್ಲಿ ನಡೆದ ಹಿಂಸೆ, ದಮನಕಾರಿ ನೀತಿ ಜನರಲ್ಲಿ ರೋಷವುಕ್ಕಿಸಿತೆ ಹೊರತು ಅವರಲ್ಲಿ ಹೋರಾಟದ ಕಸುವನ್ನು ಕಸಿದುಕೊಂಡಿರಲಿಲ್ಲ, ಎನ್ನುವುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕಿದೆ.
ಎರಡನೆಯ ಮಹಾಯುದ್ಧದ ನಂತರದಲ್ಲಿ ಸಕ್ರಿಯವಾದ ಶೀತಲ ಸಮರ ಜಗತ್ತಿನಲ್ಲಿ ಸಮಾಜವಾದಿ ಶಕ್ತಿ ಕೇಂದ್ರಗಳಿಗೆ ಹಿನ್ನಡೆಯಾದ ತೊಂಭತ್ತರ ದಶಕದ ನಂತರ ತಣ್ಣಗಾಗಿ ಮೇಲ್ನೋಟಕ್ಕೆ ಪರಿಸ್ಥಿತಿ ಶಾಂತವಾದಂತೆ ಕಂಡುಬಂತು. ಜಗತ್ತಿನಲ್ಲಿ ಇದು ಉಂಟು ಮಾಡುತ್ತಿರುವ ಪರಿವರ್ತನೆ ‘ಉದಾರೀಕರಣ, ಜಾಗತೀಕರಣ, ಮಾರುಕಟ್ಟೆ ನಿರ್ದೇಶಿತ ನಿಯಮ” ಎಂದು ಕರೆಯಲ್ಪಡುತ್ತಿರುವ ಇನ್ನೊಂದು ರೀತಿಯ ಬದಲಾವಣೆಗೆ ಮುನ್ನುಡಿ ಬರೆಯಿತು. ಈ ಬದಲಾವಣೆ ಕೊಳ್ಳುವ ಸಾಮರ್ಥ್ಯವಿಲ್ಲದವರಿಗೆ, ಬಡದೇಶಗಳ ಪಾಲಿಗೆ ಉಸಿರು ಕಟ್ಟಿಸುವ ರೀತಿಯದ್ದಾಗಿದೆ ಎನ್ನುವುದು ಸಂಕಟದಲ್ಲಿರುವ ಬಹುತೇಕರ ನೋವು. ನಮ್ಮ ದೇಶದ ಪರಿಸ್ಥಿತಿಯನ್ನು ಗಮನಿಸಿದರೂ ಕೆಳ ಮತ್ತು ತಳ ವರ್ಗದಿಂದ ಬಹುತೇಕ ಇದೇ ಅಭಿಪ್ರಾಯ ಕೇಳಿ ಬರುತ್ತಿದೆ. ಇದರ ಪರಿಣಾಮ ಎಲ್ಲ ರಂಗಗಳ ಮೇಲೂ ಆಗಿರುವಂತೆ ಶಿಕ್ಷಣದ ಮೇಲೂ ಅಗುತ್ತಿದೆ. ನಾಡಿನ ಪ್ರಜ್ಞೆಯನ್ನು ರೂಪಿಸುವಲ್ಲಿ ಶಿಕ್ಷಣ ವ್ಯವಸ್ಥೆಯ ಭೂಮಿಕೆ ಬಹಳ ಪ್ರಮುಖವಾದದ್ದು.
ಈ ಹಿಂದಿನಂತೆ ಶಿಕ್ಷಣ ವ್ಯವಸ್ಥೆಯಲ್ಲಿ ವೈಚಾರಿಕತೆಯ ವಾತಾವರಣ ನಿಧಾನವಾಗಿ ಮರೆಯಾಗುತ್ತಿದೆ. ಶಿಕ್ಷಣದ ಉದ್ದೇಶವೇ ಬದಲಾದಂತಿವೆ. ಈ ಹಿಂದೆ ವಿಚಾರ ಸಂಕಿರಣ, ಚರ್ಚೆ ಸಂವಾದಗಳು ಪ್ರಾಶಸ್ತ್ಯ ಪಡೆದು ಹೊಸ ವಿಚಾರಗಳು, ಹೊಸ ರೀತಿಯ ಆಲೋಚನೆಗೆಳಿಗೆ, ನಾಯಕತ್ವಕ್ಕೆ ದಾರಿ ಮಾಡಿಕೊಡುತ್ತಿತ್ತು. ಈಗ ಉದ್ಯೋಗ ಮೇಳ, ಸಾಂಸ್ಕೃತಿಕ ವೈಭವ, ಪರಂಪರೆಯ ವೈಭವೀಕರಣದಂತಹ ಕಾರ್ಯಕ್ರಮಗಳು ಮಹತ್ವ ಪಡೆಯುತ್ತಿವೆ. ಬಹುತೇಕ ಉನ್ನತ ಶಿಕ್ಷಣ ವ್ಯವಸ್ಥೆಗಳು ಸಮಸ್ಯೆ, ಸವಾಲುಗಳಿಂದ ಕಂಗೆಟ್ಟು ಹೋಗಿವೆ. ಇಂತಹ ಪರಿಸ್ಥಿತಿಯಿಂದ ಲಾಭ ಆಗುತ್ತಿರುವುದು ಹೊಸ ಮಾದರಿಯ ಖಾಸಗೀ ಶಿಕ್ಷಣ ವ್ಯವಸ್ಥೆಗಳಿಗೆ, ಹೊಸ ಮಾದರಿಯ ಶಿಕ್ಷಣ ವ್ಯವಸ್ಥೆ ಎಂದು ಹೇಳಲು ಪ್ರಮುಖ ಕಾರಣ, ಇಲ್ಲಿ ಒಂದೋ ವೃತ್ತಿಪರ ಶಿಕ್ಷಣಕ್ಕೆ ವಿದ್ಯಾರ್ಥಿಗಳನ್ನು ತಯಾರು ಮಾಡಲಾಗುತ್ತದೆ, ಇಲ್ಲಾ ತಮ್ಮ ಆಯ್ಕೆಯ ಪದವಿ ಪಡೆಯುವುದು ಖಾತರಿ ಇರುವಂತಹ ದೇಣಿಗೆ ಪಾವತಿಗೆ ಅವಕಾಶವಿರುವ ವ್ಯವಸ್ಥೆಯಾಗಿರುತ್ತದೆ. ಇಲ್ಲಿ ಪ್ರವೇಶ ಪಡೆದು ಅಧ್ಯಯನ ಮಾಡುತ್ತಿರುವ ಯುವ ಮನಸ್ಸುಗಳು ಸ್ಪರ್ಧಾತ್ಮಕ ಜಗತ್ತಿನ ಸವಾಲುಗಳಿಗೆ ಸಿದ್ಧವಾಗುತ್ತಿದ್ದಾರೆಯೇ ಹೊರತು, ಸಮುದಾಯ ಜೀವಿಗಳಾಗಿ, ಬದುಕು ಕಟ್ಟಿಕೊಳ್ಳುವುದರ ಕಡೆಗೆ ಗಮನವಿಟ್ಟಂತೆ ಕಾಣುವುದಿಲ್ಲ.
ಒಂದು ಕಾಲದಲ್ಲಿ ದೇಶಕ್ಕೆ ಅತ್ಯುತ್ತಮ ನಾಯಕರನ್ನು, ಮುತ್ಸದ್ದಿಗಳನ್ನು, ಚಿಂತಕರನ್ನು ನೀಡಿದ ವಿಶ್ವವಿದ್ಯಾನಿಲಯಗಳ ಮೇಲೆ ವ್ಯವಸ್ಥಿತವಾದ ರೀತಿಯಲ್ಲಿ ದಾಳಿಗಳಾಗುತ್ತಿವೆ. ಅವುಗಳ ಶೈಕ್ಷಣಿಕ ಸಾಧನೆಯನ್ನು ಹಿನ್ನೆಲೆಗೆ ತಳ್ಳಿ, ಇಲ್ಲಸಲ್ಲದ ನೆಪದಲ್ಲಿ ಸಾಧನೆಗೆ ಮಸಿ ಬಳಿಯುವ ಕೆಲಸ ನಡೆಯುತ್ತಿರುವುದನ್ನು ನಾವು ನೋಡಬಹುದು. ನೆಲದ ಕಾನೂನಿನಂತೆ ನಡೆದುಕೊಳ್ಳುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎನ್ನುವುದನ್ನು ಒಪ್ಪುತ್ತಲೇ, ಕಾನೂನಿನ ಅನುಷ್ಠಾನದಲ್ಲಿ ಮುಗ್ಧತೆ, ಪಾರದರ್ಶಕತೆಯನ್ನು ಉಳಿಸಿಕೊಳ್ಳುವುದರಲ್ಲಿಯೇ ಅದರ ಮಹತ್ವವಿದೆ ಎನ್ನುವುದನ್ನು ಮರೆಯಲಾಗದು. ಆರೋಪ ಹೊರಿಸಿ ವಿಚಾರಣೆಯೇ ನಡೆಸದೆ ವರ್ಷಗಟ್ಟಲೆ ಜೈಲಿನಲ್ಲಿಟ್ಟು, ಕೊನೆಗೆ ಆತ ನಿರಪರಾಧಿ ಎಂದು ಹೇಳುವ ವ್ಯವಸ್ಥೆಯನ್ನು ಏನೆಂದು ಕರೆಯುವುದು? ಉದಾರೀಕರಣದ ನಂತರ ದೇಶದ ಸಂಪತ್ತಿನಲ್ಲಿ ಏರಿಕೆಯಾಗಿದೆ, ಆರ್ಥಿಕವಾಗಿ ಪ್ರಗತಿ ಸಾಧಿಸಿದ್ದೇವೆ, ಆದರೆ ಅದರ ಫಲ ಕೇವಲ ಬೆರಳೆಣಿಕೆಯ ಕುಟುಂಬಗಳ ಅಧೀನದಲ್ಲಿ ಉಳಿದರೆ, ಅದರಿಂದ ಸಾಮಾನ್ಯ ನಾಗರಿಕರಿಗೆ ಏನು ಫಲ? ಇಂತಹ ಪರಿಸ್ಥಿತಿಯು ಹುಟ್ಟುಹಾಕುತ್ತಿರುವ ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ, ರಾಜಕೀಯ ಪರಿಣಾಮಗಳ ಬಗ್ಗೆ ಉನ್ನತ ಶಿಕ್ಷಣ ಸಂಸ್ಥೆಗಳು ಅಧ್ಯಯನ, ಸಂಶೋಧನೆ ನಡೆಸದಿದ್ದರೆ ಈ ಕೆಲಸವನ್ನು ಇನ್ಯಾರು ಮಾಡಬಹುದು? ಭರವಸೆಯ ಭವಿಷ್ಯ ಒಂದನ್ನು ಕಟ್ಟಿಕೊಳ್ಳಲು ವರ್ತಮಾನದ ಸವಾಲುಗಳ ಸ್ವರೂಪ, ಕಾರಣ, ಪರಿಣಾಮಗಳ ಪರಾಮರ್ಶೆಗೆ ಯಾರಾದರೂ ಮುಂದಾಗಬೇಕಿದೆ ತಾನೆ? ಈ ಕೆಲಸವನ್ನು ರಾಜಕಾರಣಿಗಳು, ಭಜನಾ ಮಂಡಳಿಗಳಿಗೆ ಬಿಟ್ಟುಬಿಟ್ಟರೆ ಯಾವ ರೀತಿಯ ಪರಿಹಾರ ದೊರೆತೀತು?
ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಯ ಪರಿಣಾಮವಾಗಿ ಅಲ್ಲಿಯ ಧಾರ್ಮಿಕ ಅಲ್ಪಸಂಖ್ಯಾತರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ನಮ್ಮ ಸಮಾಜದಲ್ಲಿಯೂ ಸಹಾನುಭೂತಿ ವ್ಯಕ್ತವಾಯಿತು. ಇದು ಮಾನವೀಯ ನಡೆ ಮತ್ತು ನಡೆಯಬೇಕಾದದ್ದೇ. ಈ ಕುರಿತು ನಮ್ಮ ದೇಶದ ಬುದ್ಧಿಜೀವಿಗಳು ಚಿಂತಕರು ಧ್ವನಿ ಎತ್ತಬೇಕು ಎನ್ನುವ ಕೂಗು ಕೇಳಿ ಬಂತು. ನಾವು ನಮ್ಮ ದೇಶದ ಬುದ್ಧಿಜೀವಿಗಳನ್ನು ಚಿಂತಕರನ್ನು ಹಿಂಸೆ, ದರ್ಪ, ದಬ್ಬಾಳಿಕೆಗಳಿಂದ ನಿಯಂತ್ರಿಸಲು ಪ್ರಯತ್ನಿಸುತ್ತೇವೆ. ನಮ್ಮ ಸುತ್ತಮುತ್ತಲಿನ ದೇಶಗಳಲ್ಲಿ ನಡೆಯುತ್ತಿರುವ ವಿದ್ಯಮಾನಗಳು ನೀಡುವ ಸಂದೇಶಗಳು ಬಹಳ ಸ್ಪಷ್ಟವಾಗಿವೆ. ನಾವು ಧರ್ಮ, ಭಾಷೆ, ಜಾತಿಯ ಆಧಾರದಲ್ಲಿ (ಜ್ಞಾನವಿರಲಿ, ಅಧಿಕಾರವಿರಲಿ) ವ್ಯವಸ್ಥೆಯನ್ನು ನಡೆಸಲು ನಿರ್ಧರಿಸಿದರೆ ಅದರಿಂದ ಉಂಟಾಗುವ ಸಾಮಾಜಿಕ ಒತ್ತಡ, ಆರ್ಥಿಕ ಅಸಮಾನತೆ ಮತ್ತು ರಾಜಕೀಯ ಸಂಘರ್ಷ ಇಡೀ ಸಮುದಾಯದ ಶಾಂತಿಯನ್ನು ಅಪಾಯದಲ್ಲಿಡುತ್ತದೆ. ಸಮುದಾಯದಲ್ಲಿರುವ ಪ್ರತಿಯೊಬ್ಬರನ್ನು ಗೌರವಿಸುವ, ಅರ್ಥಮಾಡಿಕೊಳ್ಳವ, ಮನೋಭಾವನೆಯನ್ನು ಬೆಳೆಸಿಕೊಳ್ಳದಿದ್ದರೆ ನೆಮ್ಮದಿಯಿಂದ ನಿದ್ರೆ ಮಾಡುವುದು ಸಾಧ್ಯವಿಲ್ಲ. ಸದ್ಯ ಇಡೀ ಜಗತ್ತಿನಲ್ಲಿಯೇ ಈ ರೀತಿಯ ಸಮೀಪ ದೃಷ್ಟಿಯ ಸನ್ನಿ ವ್ಯಾಪಕವಾಗಿ ಹರಡಿಕೊಂಡಿದೆ.
“ಸರ್ವೋದಯ”ದ ಕಲ್ಪನೆ ಈ ಸಮಯದಲ್ಲಿ ಹೆಚ್ಚು ಪ್ರಸ್ತುತವೆನಿಸುತ್ತದೆ. ಸಮಾಜದಲ್ಲಿ ಬಹುಜನರು, ಸುಖವಾಗಿರುವುದಕ್ಕಿಂತಲೂ ಪ್ರತಿಯೊಬ್ಬರೂ ಅಸಂತೋಷದಿಂದ ಮುಕ್ತರಾಗಿರುವ ವ್ಯವಸ್ಥೆ ಮಹತ್ವವಾದದ್ದು. ನಮ್ಮ ಯೋಚನೆಯನ್ನು ರೂಪಿಸುವುದು ಕುಟುಂಬ ಸಮುದಾಯ ಮತ್ತು ಶಿಕ್ಷಣ ವ್ಯವಸ್ಥೆ. ಇಲ್ಲಿಯೇ ನಾವು ಬೇಲಿ ಹಾಕಿಕೊಂಡು ಬದುಕುವುದನ್ನೇ ಅಭ್ಯಾಸ ಮಾಡಿಕೊಂಡು, ಪರಸ್ಪರರನ್ನು ಅರಿಯುವುದಕ್ಕೆ ಅಗತ್ಯವಿರುವ ವಿಶಾಲ ಜಗತ್ತಿಗೆ ಹೋಗಲಾರದೆ ನಮ್ಮೊಳಗೇ ನಾವು ಬಂಧಿಗಳಾಗಿದ್ದೇವೆ. ಸಮಾಜದ ಎಲ್ಲರೂ ಒಂದೆಡೆ ಕಲೆತು ಅರಿತು ಬದುಕಲು ಸಮುದಾಯ ಶಾಲೆಗಳು ಬಹಳ ಮುಖ್ಯ. ಆದರೆ ಮಾಧ್ಯಮದ ಹೆಸರಲ್ಲಿ, ಭಾಷೆಯ ಹೆಸರಲ್ಲಿ, ಧರ್ಮದ ಹೆಸರಲ್ಲಿ, ಅಂತಸ್ತು ಅಧಿಕಾರದ ಹೆಸರಲ್ಲಿ ಹಂಚಿಹೋಗಿರುವ ನಾವು ಒಟ್ಟಾಗಿ ಬದುಕುವ ಅವಕಾಶಗಳಿಗೆ ಬೆನ್ನು ಹಾಕುವುದೇ ಸಾಧನೆ ಅಂದುಕೊಂಡಿದ್ದೇವೆ. ಜಾಗತೀಕರಣೋತ್ತರದ ಪ್ರಸ್ತುತ ಕಾಲಘಟ್ಟದಲ್ಲಿ ಹಲವು ರೀತಿಯ ಸಮಸ್ಯೆಗಳ ಸುಳಿಯಲ್ಲಿ ಸಿಕ್ಕಿ ಒದ್ದಾಡುತ್ತಿರುವ ನಾವು ನಮ್ಮದೇ ರೆಕ್ಕೆಗಳನ್ನು ಕತ್ತರಿಸಿಕೊಂಡು, ಹಾರಲಾರದೆ ಒದ್ದಾಡುವ ಹಕ್ಕಿಯಂತಾಗಿದೆ ನಮ್ಮ ಸ್ಥಿತಿ. ಸರ್ವರಿಗೂ ಗುಣಮಟ್ಟದ ಶಿಕ್ಷಣ, ಆರೋಗ್ಯ ಒದಗಿಸುವ ವ್ಯವಸ್ಥೆ ಮತ್ತು ಭವಿಷ್ಯದ ಕುರಿತು ಭರವಸೆ ಹುಟ್ಟಿಸಬಲ್ಲ ಪಾರದರ್ಶಕ ಆಡಳಿತ ವ್ಯವಸ್ಥೆ ರೂಪಿಸುವುದು ನಮ್ಮೆಲ್ಲರ ಹೊಣೆಯಾಗಿದೆ.
ಡಾ. ಉದಯ ಕುಮಾರ ಇರ್ವತ್ತೂರು
ವಿಶ್ರಾಂತ ಪ್ರಾಂಶುಪಾಲರು
ಇದನ್ನೂ ಓದಿ- ವರ್ತಮಾನದ ಭಾರತಕ್ಕೆ ಅಂಬೇಡ್ಕರ್ ಅನಿವಾರ್ಯವಲ್ಲವೇ?