ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧದ ಪೋಕ್ಸೋ ಪ್ರಕರಣ; ಇಂದು ವಿಚಾರಣೆ

Most read



ಬೆಂಗಳೂರು: ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿಯಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಪೋಕ್ಸೋ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ-2012) ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಬಿಜೆಪಿ ಮುಖಂಡ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆ ಡಿ.19
ಗುರುವಾರಕ್ಕೆ ಮುಂದೂಡಲಾಗಿದೆ. ಯಡಿಯೂರಪ್ಪ ಸಲ್ಲಿಸಿರುವ ರಿಟ್ ಅರ್ಜಿಯನ್ನು, ಶಾಸಕರು, ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಪೀಠದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ಬುಧವಾರ ವಿಚಾರಣೆ ನಡೆಸಿದರು.

ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ರವಿವರ್ಮ ಕುಮಾರ್‌ ಅವರು ಅವರ ಪ್ರಕರಣ ರದ್ದುಪಡಿಸಬೇಕೆಂಬ ಯಡಿಯೂರಪ್ಪ ಅವರ ಅರ್ಜಿಯನ್ನು ವಿರೋಧಿಸಿದರು.  ಬಾಲಕಿಯ ಉಡುಪಿನ ಒಳಗೆ ಏಕೆ ಕೈ ಹಾಕಿದ್ದೀರಿ ಎಂದು ಪ್ರಶ್ನಿಸಿದ್ದಕ್ಕೆ ಆಕೆಯ ಮೇಲೆ ಅತ್ಯಾಚಾರ ನಡೆದಿದೆಯೋ ಇಲ್ಲವೋ ಎಂದು ಪರಿಶೀಲನೆ ಮಾಡಲು ಕೈ ಹಾಕಿದ್ದೆ ಎಂದು ಸ್ವತಃ ಯಡಿಯೂರಪ್ಪ ಅವರೇ ಹೇಳಿದ್ದಾರೆ. ಅವರ ಈ ವರ್ತನೆಯೇ ಲೈಂಕಿಕ ಕಿರುಕುಳ ನಡೆದಿದೆ ಎನ್ನುವುದನ್ನು ತೋರಿಸುತ್ತದೆ ಎಂದು ದೋಷಾರೋಪ ಪಟ್ಟಿಯಲ್ಲಿ ಹೇಳಲಾಗಿರುವ ಈ ಅಂಶವನ್ನು ತೆರೆದ ನ್ಯಾಯಾಲಯದಲ್ಲಿಯೇ  ಓದಿ ಹೇಳಿದರು.

ಅತ್ಯಾಚಾರ ನಡೆದಿದೆಯೊ ಇಲ್ಲವೊ ಎಂದು ಪರಿಶೀಲಿಸಲು ಬಾಲಕಿಯ ಉಡುಪಿನ ಒಳಗೆ ಕೈ ಹಾಕಿದ್ದೆ ಎಂದು ಸ್ವತಃ ಯಡಿಯೂರಪ್ಪ ಹೇಳಿದ್ದಾರೆ. ಅವರ ಈ ಕೃತ್ಯ ಬಾಲಕಿಯ ಮೇಲಿನ ಲೈಂಗಿಕ ದೌರ್ಜನ್ಯವಲ್ಲವೇ ಎಂದು ಪ್ರಶ್ನಿಸಿದ ರವಿವರ್ಮಕುಮಾರ್ ಲೈಂಗಿಕ ದೌರ್ಜನ್ಯ ನಡೆದಿರುವುದು ಸ್ಪಷ್ಟವಾಗಿದೆ. ಹಾಗಾಗಿ, ಪ್ರಕರಣ ರದ್ದುಪಡಿಸುವಂತೆ ಕೋರಿರುವ ಯಡಿಯೂರಪ್ಪನವರ ಅರ್ಜಿ ವಜಾಗೊಳಿಸಬೇಕು ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.

ಪ್ರಾಸಿಕ್ಯೂಟರ್‌ ಅವರ ಈ ವಾದವನ್ನು ಅಲ್ಲಗಳೆದ ಅರ್ಜಿದಾರ ಯಡಿಯೂರಪ್ಪ ಪರ ಹಿರಿಯ ವಕೀಲ ಸಿ.ವಿ.ನಾಗೇಶ್, ಸಂತ್ರಸ್ತ ಬಾಲಕಿಯ ತಾಯಿ ದೂರು ನೀಡಿದ್ದಾರೆ. ಆದರೆ ಅವರು ಈಗ ಬದುಕಿಲ್ಲ. ಘಟನೆ ನಡೆದ ಒಂದೂವರೆ ತಿಂಗಳ ನಂತರ ಪ್ರಕರಣ ದಾಖಲಿಸಿದ್ದಾರೆ. ಯಡಿಯೂರಪ್ಪ ಅನುಚಿತವಾಗಿ ಸ್ಪರ್ಶಿಸಿದ್ದಾರೆ ಎಂದು ಬಾಲಕಿ ಹೇಳಿಕೆ ನೀಡಿದ್ದಾಳೆ. ಆ ಸಂದರ್ಭದಲ್ಲಿ ಯಡಿಯೂರಪ್ಪ ಅವರ ನಿವಾಸದಲ್ಲಿ ಹಲವು ಮಂದಿ ಇದ್ದರು. ಅವರೆಲ್ಲರ ಎದುರು ಇಂತಹ ಘಟನೆ ನಡೆಯಲು ಸಾಧ್ಯವಿಲ್ಲ. ಈಕೆ ಹಲವು ರಾಜಕಾರಣಿಗಳ ವಿರುದ್ಧ ದೂರು ದಾಖಲಿಸಿದ್ದಾರೆ ಎನ್ನುವುದನ್ನೂ ನ್ಯಾಯಾಲಯದ ಗಮನಕ್ಕೆ ತಂದರು. ಯಡಿಯೂರಪ್ಪ ಅವರಿಗೆ ಈಗ 82 ವರ್ಷ.
ಅವರಿಗೆ ಕೈ ನಡುಗುತ್ತವೆ. ಲೈಟ್‌ ನ ಸ್ವಿಚ್‌ ಹಾಕಲೂ ಅವರು ಮತ್ತೊಬ್ಬರನ್ನು ಆಶ್ರಯಿಸುತ್ತಾರೆ. ಬಾಲಕಿಯ ಹೇಳಿಕೆ ಆಧರಿಸಿ ದೋಷಾರೋಪ ಪಟ್ಟಿ ದಾಖಲಿಸಲಾಗಿದೆ ಎಂದು ಹೇಳಿದಾಗ ನ್ಯಾಯಮೂರ್ತಿ ನಾಗಪ್ರಸನ್ನ ಅವರು, ನ್ಯಾಯಾಲಯ ಈ ಹಂತದಲ್ಲಿ ಬಾಲಕಿಯ 164ರ ಹೇಳಿಕೆಯನ್ನು ಪರಿಗಣಿಸಬೇಕಲ್ಲವೇ ಎಂದು ಪ್ರಶ್ನಿಸಿದರು. ಆಗ
ನಾಗೇಶ್ ಅವರು, ಯಡಿಯೂರಪ್ಪ ಅವರ ಕೊಠಡಿಗೆ ಬಾಲಕಿ ಹೋಗಿರಲಿಲ್ಲ ಎಂಬ ಸಾಕ್ಷಿಯ ಹೇಳಿಕೆ ಇದೆ. ಯಡಿಯೂರಪ್ಪನವರ ಜತೆ ಸದಾ ಭದ್ರತಾ ಸಿಬ್ಬಂದಿ ಇರುತ್ತಾರೆ. ಅಲ್ಲಿದ್ದ ಎಲ್ಲ ಸಾಕ್ಷಿಗಳೂ ಇಂತಹ ಘಟನೆ ನಡೆದಿಲ್ಲ, ಯಡಿಯೂರಪ್ಪ ಹಾಲ್ ಬಿಟ್ಟು ಎಲ್ಲೂ ಹೋಗಿರಲಿಲ್ಲವೆಂದು ಹೇಳಿಕೆ ನೀಡಿದ್ದಾರೆ. ಆದರೂ ತನಿಖಾಧಿಕಾರಿಗಳು ಬಾಲಕಿಯ ಹೇಳಿಕೆಯನ್ನು ಆಧರಿಸಿ ದೋಷಾರೋಪ ಪಟ್ಟಿ ದಾಖಲು ಮಾಡಿದ್ದಾರೆ ಎಂದು ಲೋಪಗಳ ಪಟ್ಟಿ ಮಾಡಿದರು.

ಈ ಸಂದರ್ಭದಲ್ಲಿ ರವಿವರ್ಮ ಕುಮಾರ್‌ ಅವರು ದೋಷಾರೋಪ ಪಟ್ಟಿಯಲ್ಲಿದ್ದ ಮತ್ತಷ್ಟು ಅಂಶಗಳನ್ನು ಓದಲು ಮುಂದಾದಾಗ ನ್ಯಾಯಮೂರ್ತಿ ನಾಗಪ್ರಸನ್ನ ಅವರು ಈಗ ದಿನದ ಕಲಾಪ ಮುಕ್ತಾಯ ಹಂತದಲ್ಲಿದೆ. ಬೇರೆ ಪ್ರಕರಣಗಳ ವಿಚಾರಣೆಗೆ ಅವಕಾಶ ಕಲ್ಪಿಸಬೇಕಾಗಿದೆ ಎಂದು ಪ್ರಕರಣವನ್ನು ಇಂದಿಗೆ ಮುಂದೂಡಿದರು.

More articles

Latest article