ಅತುಲ್‌ ಸುಭಾಷ್‌ ಆತ್ಮಹತ್ಯೆ ಪ್ರಕರಣ; ಅತ್ತೆ, ಬಾವಮೈದುನ ಬಂಧನ, ಪತ್ನಿ ಪರಾರಿ

Most read

ಬೆಂಗಳೂರು: ಸಾಫ್ಟ್‌ ವೇರ್‌ ಇಂಜಿನಿಯರ್‌ ಅತುಲ್‌ ಸುಭಾಷ್‌ ಆತ್ಮಹತ್ಯೆ ಪ್ರಕರಣಕ್ಕೆ
ಸಂಬಂಧಿಸಿದಂತೆ ಅವರ ಅತ್ತೆ ನಿಶಾ ಸಿಂಘಾನಿಯಾ ಮತ್ತು ಬಾವಮೈದುನ ಅನುರಾಗ್‌ ಅವರನ್ನು ಬೆಂಗಳೂರಿನ  ಮಲ್ಲತ್ತಹಳ್ಳಿ ಪೊಲೀಸ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ. ಅವರನ್ನು ಸ್ತಳೀಯ ಪೊಲೀಸ್‌ ಠಾಣೆ ಜೌನ್‌ ಪುರ್‌ ಠಾಣೆಗೆ ಹಾಜರುಪಡಿಸಿ ಬೆಂಗಲೂರಿಗೆ ಕರೆತರಲಾಗುತ್ತದೆ. ಆದರೆ ಅತುಲ್‌ ಪತ್ನಿ ನಿಖಿತಾ ಪೊಲೀಸರ ಕೈಗೆ ಸಿಕ್ಕಿಲ್ಲ. ಅವರಿಗಾಗಿ ಹುಡುಕಾಟ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅತುಲ್ ಸುಭಾಷ್ ಸಹೋದರ ಬಿಕಾಸ್
ಕುಮಾರ್ ನೀಡಿದ ದೂರಿನ ಅನ್ವಯ ಮಾರತ್ ಹಳ್ಳಿ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಭಾರತೀಯ
ನ್ಯಾಯ ಸಂಹಿತೆ ಕಾಯ್ದೆ 108, ಆತ್ಮಹತ್ಯೆಗೆ ಪ್ರಚೋದನೆ ಆರೋಪದಡಿಯಲ್ಲಿ ಎಫ್‌ಐಆರ್
ದಾಖಲಾಗಿದೆ.

 ಪ್ರಕರಣದ ತನಿಖಾಧಿಕಾರಿಯಾಗಿರುವ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಜ್ಞಾನದೇವ್
ನೇತೃತ್ವದ ತಂಡ ನಿನ್ನೆ ಉತ್ತರಪ್ರದೇಶಕ್ಕೆ ತೆರಳಿತ್ತು.  ನಿಖಿತಾ ಹೊರ ರಾಜ್ಯಕ್ಕೆ ಪರಾರಿಯಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.  ಕಾನೂನು ಪ್ರಕಾರ ಮೊದಲು ನೋಟಿಸ್ ಜಾರಿಗೊಳಿಸಿ ಮೃತ ಅತುಲ್‌ ಪತ್ನಿಯ
ವಿಚಾರಣೆ ನಡೆಸಲಾಗುವುದು. ವಿಚಾರಣೆಗೆ ಸಹಕರಿಸದಿದ್ದರೆ ಹುಡುಕಿ ಬಂದಿಸಲಾಗುತ್ತದೆ ಎಂದು ಹಿರಿಯ ಪೊಲಿಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅತುಲ್ ವಿರುದ್ಧ ನಿಖಿತಾ 9 ಪ್ರಕರಣಗಳನ್ನು ದಾಖಲಿಸಿದ್ದು, ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗಲು ಬೆಂಗಳೂರಿನಿಂದ ಜೈನಾಪುರಕ್ಕೆ 40 ಬಾರಿ ಹೋಗಿದ್ದರು. ಆಕೆಯ
ಮನೆಯವರಿಂದ ತುಂಬಾ ಕಷ್ಟಪಟ್ಟಿದ್ದ ಎಂದು ಅತುಲ್ ಪೋಷಕರು ಆರೋಪಿಸಿದ್ದಾರೆ.

ಅತುಲ್ ಸುಭಾಷ್, ನಿಖಿತಾ ಸಿಂಘಾನಿಯಾಗೆ 2019ರಲ್ಲಿ ವಿವಾಹವಾಗಿದ್ದು, 4 ವರ್ಷದ ಗಂಡು
ಮಗು ಇದೆ. ಆದರೆ ತನ್ನ ತಾಯಿ ಹಾಗೂ ಸಹೋದರನ ಕುಮ್ಮಕ್ಕಿನಿಂದ ಅತುಲ್ ವಿರುದ್ಧ ನಿಕಿತಾ
ಸುಳ್ಳು ದೂರು ದಾಖಲಿಸಿದ್ದಳು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಆರೋಪಿಗಳು ಅತುಲ್
ಸುಭಾಷ್‌ಗೆ ಮಗನನ್ನು ನೋಡಲೂ ಅವಕಾಶ ನೀಡಿರಲಿಲ್ಲ. ಪುತ್ರನ ಭೇಟಿಗೆ ರೂ.30 ಲಕ್ಷಕ್ಕೆ
ಬೇಡಿಕೆಯಿಟ್ಟಿದ್ದರು. ನ್ಯಾಯಾಲಯದ ಕಲಾಪಗಳಿಗೆ ಹಾಜರಾದಾಗ ರೂ. 3 ಕೋಟಿ
ಕೊಡಲಾಗದಿದ್ದರೆ ಬದುಕಿರಬೇಡ ಎಂದು ಹಿಯಾಳಿಸುತ್ತಿದ್ದರು. ಇದರಿಂದ ಮಾನಸಿಕವಾಗಿ ಹಾಗೂ
ದೈಹಿಕವಾಗಿ ನೊಂದ ಅತುಲ್ ಸುಭಾಷ್ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಬಿಕಾಸ್
ಕುಮಾರ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.


More articles

Latest article