ಬೆಂಗಳೂರು; ದ್ವಿಚಕ್ರ ವಾಹನ, ಗ್ಯಾಸ್ ಸಿಲಿಂಡರ್ ಹಾಗೂ ಬ್ಯಾಟರಿ ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ತಿಲಕ್ ನಗರ ಪೊಲೀಸರು ಬಂಧಿಸಿದ್ದಾರೆ. ಜೆ.ಪಿ.ನಗರ ನಿವಾಸಿಗಳಾದ ಫಯಾಜ್ ಖಾನ್ (27) ಹಾಗೂ ಇಲಿಯಾಸ್ ನಗರದ ನಿವಾಸಿ ಮಹ್ಮದ್ ಉಮರ್ ಷರೀಫ್ (26) ಬಂಧಿತ ಆರೋಪಿಗಳು. ಇವರಿಂದ 11 ದ್ವಿಚಕ್ರ ವಾಹನಗಳು, 40 ಗ್ಯಾಸ್ ಸಿಲಿಂಡರ್ ಹಾಗೂ 28 ಬ್ಯಾಟರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳ ಮೌಲ್ಯ 15 ಲಕ್ಷ ರೂ. ಎಂದು ಪೊಲೀಸರು ಹೇಳಿದ್ದಾರೆ.
ತಿಲಕನಗರದ ಹೊರ ವರ್ತುಲ ರಸ್ತೆಯ ಬಟ್ಟೆ ಅಂಗಡಿಯ ಮಾಲೀಕರೊಬ್ಬರು ನೀಡಿದ ದೂರು ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ.
ಇವರು ದ್ವಿಚಕ್ರ ವಾಹನ, ಮನೆಗಳ ಹೊರಗೆ ಇಡಲಾಗುತ್ತಿದ್ದ ಗ್ಯಾಸ್ ತುಂಬಿದ ಹಾಗೂ ಖಾಲಿ ಸಿಲಿಂಡರ್ ಗಳು ಹಾಗೂ ಅಂಗಡಿಗಳಲ್ಲಿ ಬ್ಯಾಟರಿಗಳನ್ನು ಕಳ್ಳತನ ಮಾಡಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಆರೋಪಿಗಳಿಂದ ಬ್ಯಾಟರಿ ಹಾಗೂ 12 ಗ್ಯಾಸ್ ಸಿಲಿಂಡರ್ ಗಳನ್ನು ಖರೀದಿಸಿದ್ದ ಗೊಟ್ಟಿಗೆರೆ ರಸ್ತೆಯ ನಿವಾಸಿಯೊಬ್ಬರಿಗೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್ ನೀಡಿದ್ದಾರೆ. ಬೆಟ್ಟದಾಸನಪುರದಲ್ಲಿ ವಾಸವಿರುವ ಮಹಿಳೆಯೊಬ್ಬರೂ ಆರೋಪಿಗಳಿಂದ ನಾಲ್ಕು ಸಿಲಿಂಡರ್ ಖರೀದಿ ಮಾಡಿದ್ದರು. ಅವರಿಗೂ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಸೂಚನೆ ನೀಡಿದ್ದಾರೆ. ಆರೋಪಿಗಳು ಬಿಟಿಎಂ ಲೇ ಔಟ್ ಗುಜರಿ ಅಂಗಡಿಯಿಂದ ಬ್ಯಾಟರಿ ಹಾಗೂ ತಿಲಕನಗರದ ಜಲಭವನದ ಪಕ್ಕದಲ್ಲಿ ನಿಲುಗಡೆ ಮಾಡಿದ್ದ ಐದು ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.