ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಾದ ಚಿತ್ರನಟ ದರ್ಶನ್, ಪವಿತ್ರಾ ಗೌಡ, ಮತ್ತಿತರ ಆರೋಪಿಗಳ ರೆಗ್ಯುಲರ್ ಜಾಮೀನು ಅರ್ಜಿಗಳ ವಿಚಾರಣೆ ಡಿಸೆಂಬರ್ 6ಕ್ಕೆ ಮುಂದೂಡಲಾಗಿದೆ. ಹೈಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದ್ದು, ಈ ಕೊಲೆ ಪ್ರಕರಣದ ಮೊದಲ ಆರೋಪಿ ಪವಿತ್ರಾ ಗೌಡ ಪರ ಟಾಮಿ ಸೆಬಾಸ್ಟಿಯನ್ ವಾದ ಮಂಡಿಸಿದರು. ಚಾಲಕ ಲಕ್ಷ್ಮಣ್ ಪರ ಅರುಣ್ ಶ್ಯಾಮ್ ವಾದಿಸಿದರು.
ಪವಿತ್ರಾ ಪರ ವಕೀಲರು ವಾದ ಮಂಡಿಸಿ ಪವಿತ್ರಾ ಅವರ ಪುತ್ರಿ ಒಂಬತ್ತನೇ ತರಗತಿಯಲ್ಲಿ ಓದುತ್ತಿದ್ದಾಳೆ. ಅವಳಿನ್ನೂ ಅಪ್ರಾಪ್ತೆಯಾಗಿರುವ ಕಾರಣಕ್ಕೆ ಜಾಮೀನು ನೀಡಬೇಕು ಎಂದು ವಾದ ಮಂಡಿಸಿದ್ದಾರೆ. ಈ ಹಿಂದೆ ಮಹಿಳೆ ಎನ್ನುವ ಕಾರಣಕ್ಕಾಗಿ ಜಾಮೀನು ನೀಡಿರುವ ಅನೇಕ ಉದಾಹರಣೆಗಳನ್ನು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ. ಪವಿತ್ರಾ ಅವರಿಗೆ ಯಾವುದೇ ಕ್ರಿಮಿನಲ್ ಹಿನ್ನೆಲೆ ಇಲ್ಲ. ಈ ಹಿಂದೆ ಅವರು ಯಾವುದೇ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿಲ್ಲ. ಆದ್ದರಿಂದ ಅವರಿಗೆ ಜಾಮೀನು ನೀಡಬಹುದು ಎಂದು ವಾದಿಸಿದರು. ರೇಣುಕಾಸ್ವಾಮಿ ಪವಿತ್ರಾ ಅವರಿಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದ. ಇದರಿಂದ ಅವರು ಬೇಸತ್ತಿದ್ದರು. ಮತ್ತೊಬ್ಬ ಆರೋಪಿ ಸಂದೇಶ್ ಪವಿತ್ರಾ ಪರವಾಗಿ ರೇಣುಕಾಸ್ವಾಮಿಗೆ ಸಂದೇಶಗಳನ್ನು ಕಳುಹಿಸುತ್ತಿದ್ದ ಎಂದು ನ್ಯಾಯಾಲಯದ ಗಮನಕ್ಕೆ ತಂದರು. ನ್ಯಾಯಮೂರ್ತಿಗಳು ವಿಚಾರಣೆಯನ್ನು ಡಿಸೆಂಬರ್ 6ಕ್ಕೆ ಮುಂದೂಡಿದರು. ಆರೋಪಿಗಳು ಜೈಲು ಸೇರಿ 5ತಿಂಗಳು ಕಳೆದಿದ್ದರೂ ಜಾಮೀನು ಪಡೆಯಲು ಸಾಧ್ಯವಾಗಿಲ್ಲ. ಆದರೆ ನಟ ದರ್ಶನ್ ಮಾತ್ರ ಅನಾರೋಗ್ಯದ ಹಿನ್ನಲೆಯಲ್ಲಿ 6 ವಾರಗಳ ಮಧ್ಯಂತರ ಜಾಮೀನು ಪಡೆದುಕೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜೂನ್ 8ರಂದು ರೇಣುಕಾಸ್ವಾಮಿ ಕೊಲೆ ನಡೆದಿತ್ತು. ಜೂನ್ 11ರಂದು ದರ್ಶನ್ ಮತ್ತಿತರ ಆರೋಪಿಗಳನ್ನು ಬಂಧಿಸಲಾಗಿತ್ತು. ಈ ಹತ್ಯೆ ಪ್ರಕರಣದಲ್ಲಿ ದರ್ಶನ್ ಆರೋಪಿ ನಂ2 ಆಗಿದ್ದರೆ ಇವರ ಸ್ನೇಹಿತೆ ಪವಿತ್ರಾ ಗೌಡ ಮೊದಲ ಆರೋಪಿಯಾಗಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಪವಿತ್ರಾಗೆ ಅಶ್ಲೀಲ ಸಂದೇಶಗಳು ಮತ್ತು ಫೋಟೋಗಳನ್ನು ಕಳುಹಿಸಿದ್ದಕ್ಕಾಗಿ ರೇಣುಕಾಸ್ವಾಮಿಯನ್ನು ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದರ್ಶನ್ ಪರ ವಕೀಲರಾದ ಸಿ.ವಿ. ನಾಗೇಶ್ ಅವರು ಈಗಾಗಲೇ ವಾದ ಮಂಡಿಸಿದ್ದಾರೆ. ದರ್ಶನ್ ಮ್ಯಾನೇಜರ್ ನಾಗರಾಜ್ ಪರ ಸಂದೇಶ್ ಚೌಟ ಅವರು ಇಂದು ವಾದ ಮಾಡಿದ್ದಾರೆ. ಎಲ್ಲ ಆರೋಪಿಗಳ ಪರ ವಕೀಲರು ವಾದ ಪೂರ್ಣಗೊಳಿಸಿದ ನಂತರ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರಸನ್ನಕುಮಾರ್ ಆರೋಪಿಗಲೀಗೆ ಜಾಮೀನು ನೀಡಬಾರದು ಎಂದು ವಾದಿಸಲಿದ್ದಾರೆ.