ಬೆಂಗಳೂರು:ಬೆಂಗಳೂರಿಗೆ ಆಗಮಿಸಿದ್ದ ಕೇರಳ ಮೂಲದ ವ್ಯಕ್ತಿಯೊಬ್ಬರನ್ನು ಬೆದರಿಸಿ 15 ಲಕ್ಷ ರೂ. ವಸೂಲಿ ಮಾಡಿಕೊಂಡು ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಈ ಸಂಬಂಧ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕೇರಳದ ಮಟನೂರಿನ ಕೆ.ಹಾಶೀಮ್ ಎಂಬುವರು ಈ ಸಂಬಂಧ ದೂರು ನೀಡಿದ್ದು, ಮೂವರು ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
ಹಾಶೀಮ್ ಅವರು ಕುಟುಂಬದ ಸದಸ್ಯರ ಜತೆ ಮಟನೂರಿನಲ್ಲಿ ನೆಲೆಸಿದ್ದು, ಸಂಬಂಧಿಕರ ಪಾಲುದಾರಿಕೆಯಲ್ಲಿ ಬೇಕರಿ ನಡೆಸುತ್ತಿದ್ದಾರೆ. ದೂರುದಾರರ ಪುತ್ರಿ ಫಾತಿಮಾ ಹಸ್ನತ್ ಅವರನ್ನು ಬೆಂಗಳೂರಿನ ಹೆಬ್ಬಾಳದ ನಿವಾಸಿ ಶಮ್ಮಾಸ್ ಅಹ್ಮದ್ ಅವರಿಗೆ ಮದುವೆ ಮಾಡಿಕೊಟ್ಟಿದ್ದರು. ಹಾಶೀಮ್ ಅವರು ಬೆಂಗಳೂರಿನಲ್ಲಿ ಬೇಕರಿ ತೆರೆಯಲು ಸೂಕ್ತ ಅಂಗಡಿ ಹುಡುಕುವಂತೆ ಅಳಿಯನಿಗೆ ತಿಳಿಸಿದ್ದರು. ಶಮ್ಮಾಸ್ ಅಂಗಡಿಯೊಂದನ್ನು ನೋಡಿದ್ದು, ರೂ. 15 ಲಕ್ಷ ಬೇಕಾಗಬಹುದು ಎಂದು ಮಾಹಿತಿ ನೀಡಿದ್ದರು. ಹಾಸೀಮ್ ಅವರು ವಿವಿಧ ಮೂಲಗಳಿಂದ 15 ಲಕ್ಷ ರೂ. ಹೊಂದಿಸಿಕೊಂಡು ನ.28ರಂದು ಕೇರಳದಿಂದ ಬೆಂಗಳೂರಿಗೆ ಆಗಮಿಸಿದ್ದರು.
ನ.29ರಂದು ಬೆಳಿಗ್ಗೆ 5 ಗಂಟೆಯ ವೇಳೆಗೆ ಸಿಟಿ ಮಾರುಕಟ್ಟೆಯಲ್ಲಿ ಬಸ್ ಇಳಿದು, ಹೆಬ್ಬಾಳದಲ್ಲಿರುವ ಅಳಿಯನ ಮನೆಗೆ ಹೋಗಿದ್ದರು. ಅಂದೇ ಬೇಕರಿಗಾಗಿ ಅಳಿಯ ನೋಡಿದ್ದ ಭೂಪಸಂದ್ರ ಮತ್ತು ಅಮೃತಹಳ್ಳಿಯಲ್ಲಿ ಅಂಗಡಿಗಳನ್ನು ನೋಡಿದ್ದರು. ಎರಡೂ ಸ್ಥಳಗಳೂ ವ್ಯಾಪಾರಕ್ಕೆ ಇಷ್ಟವಾಗದ ಕಾರಣ ಅಂದೇ ರಾತ್ರಿ ಕೇರಳಕ್ಕೆ ವಾಪಸ್ ಹೊರಟಿದ್ದರು.
ಹಣವನ್ನೂ ತಮ್ಮ ಜತೆಯಲ್ಲೇ ತೆಗೆದುಕೊಂಡು ಹೊರಟಿದ್ದಾರೆ. ಕೇರಳಕ್ಕೆ ತೆರಳಲು ನ.29ರಂದು ರಾತ್ರಿ 7.45ರ ಸುಮಾರಿಗೆ ಸಿಟಿ ಮಾರುಕಟ್ಟೆಗೆ ಬಂದಿದ್ದ ಹಾಶೀಮ್ ಬಸ್‌ಗಾಗಿ ಕಾಯುತ್ತಿದ್ದರು. ರಾತ್ರಿ 9.3೦ರ ಸುಮಾರಿಗೆ ಸ್ಥಳಕ್ಕೆ ಬಂದ ಮೂವರು ನಾವು ಪೊಲೀಸರು. ನಿಮ್ಮ ಬ್ಯಾಗ್‌ನಲ್ಲಿ ಡ್ರಗ್ಸ್ ಇದೆ ಎಂಬ ಮಾಹಿತಿ ಬಂದಿದ್ದು ಪರಿಶೀಲನೆ ನಡೆಸಬೇಕಿದೆ. ಆದ್ದರಿಂದ ಪೊಲೀಸ್ ಠಾಣೆಗೆ ಬರಬೇಕು ಎಂದು ಬಲವಂತವಾಗಿ ಕಾರು ಹತ್ತಿಸಿಕೊಂಡಿದ್ದಾರೆ. ಸ್ವಲ್ಪ ದೂರ ಹೋಗುತ್ತಿದ್ದಂತೆ ಹಲ್ಲೆ ನಡೆಸಿ ಹಣ ಸುಲಿಗೆ ಮಾಡಿಕೊಂಡು ಪರಾರಿಯಾಗಿದ್ದಾರೆ. ಆರೋಪಿಗಳ ಪತ್ತೆಗಾಗಿ ಹುಡುಕಾಟ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.