ಬೆಂಗಳೂರು: ಕರ್ನಾಟಕದಲ್ಲಿ ಅತಿ ಸುರಕ್ಷಿತ ನೋಂದಣಿ ಫಲಕ (ಎಚ್ ಎಸ್ ಆರ್ ಪಿ) ವನ್ನು ಅಳವಡಿಸಿಕೊಳ್ಳಲು ವಿಧಿಸಲಾಗಿದ್ದ ಗಡುವನ್ನು ಡಿಸೆಂಬರ್ 31ರ ವರೆಗೆ ವಿಸ್ತರಿಸಲಾಗಿದೆ. 2023 ಆಗಸ್ಟ್ ತಿಂಗಳಲ್ಲಿ ಎಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳುವಂತೆ ಅಧಿಸೂಚನೆ ಹೊರಡಿಸಲಾಗಿತ್ತು. ಅಲ್ಲಿಂದೀಚೆಗೆ ಗಡುವು ವಿಸ್ತರಣೆಯಾಗುತ್ತಲೇ ಇದೆ.
ರಾಜ್ಯದಲ್ಲಿ 2019ರ ಏಪ್ರಿಲ್ 1ಕ್ಕೂ ಮೊದಲು ನೋಂದಣಿಯಾಗಿರುವ 2 ಕೋಟಿ ವಾಹನಗಳಲ್ಲಿ ಕೇವಲ 55-60 ಲಕ್ಷ ವಾಹನಗಳು ಮಾತ್ರ ಎಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಅನ್ನು ಅಳವಡಿಸಿಕೊಂಡಿವೆ. ಇನ್ನೂ 1.40ಕೋಟಿ ವಾಹನಗಳು ಎಚ್ ಎಸ್ ಆರ್ ಪಿ ಫಲಕವನ್ನು ಅಳವಡಿಸಿಕೊಳ್ಳಬೇಕಿವೆ. ಹೊಸ ನಾಮ ಫಲಕ ಇಲ್ಲದ ವಾಹನಗಳು ಮೊದಲ ಬಾರಿಗೆ 500 ರೂ ದಂಡ ಮತ್ತು ನಂತರದಲ್ಲಿ ಪ್ರತಿ ಬಾರಿಯೂ 1000 ರೂಪಾಯಿ ದಂಡ ಕಟ್ಟಬೇಕಾಗುತ್ತದೆ.
HSRP ನಂಬರ್ ಪ್ಲೇಟ್ ಏಕೆ?
ವಾಹನಗಳ ಸುರಕ್ಷತೆ ಹಾಗೂ ಏಕರೂಪದ ಫಲಕದ ದೃಷ್ಟಿಯಿಂದ ಕೇಂದ್ರ ಸರ್ಕಾರ ಹಾಗೂ ನ್ಯಾಯಾಲಯದ ಸೂಚನೆ ಮೇರೆಗೆ ಜಾರಿಗೆ ತಂದಿರುವ HSRP ನಂಬರ್ ಪ್ಲೇಟ್ ಅನ್ನು ಅಳವಡಿಸಿಕೊಳ್ಳಬೇಕಾಗಿದೆ. ಇದಕ್ಕಾಗಿ ವಿಧಿಸಲಾಗಿದ್ದ ಗಡುವು ಮುಂದೆ ಹೋಗುತ್ತಲೇ ಇದೆ. ಈಗಾಗಲೇ ಐದು ಬಾರಿ ಗಡುವು ವಿಸ್ತರಣೆ ಮಾಡಿರುವ ಕರ್ನಾಟಕ ಸಾರಿಗೆ ಇಲಾಖೆಯು ಮತ್ತೊಮ್ಮೆ ಗಡುವನ್ನು ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ. ಹೊಸ ಆದೇಶದ ಪ್ರಕಾರ 2024 ರ ಡಿಸೆಂಬರ್ 31ರ ಒಳಗೆ ಎಚ್‌ಎಸ್ಆರ್‌ಪಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಲು ಅವಕಾಶವಿದೆ. ದ್ವಿಚಕ್ರ ವಾಹನಗಳು, ಆಟೋ ಮತ್ತು ನಾಲ್ಕು ಚಕ್ರಗಳ ವಾಹನಗಳು ಸೇರಿದಂತೆ ರಾಜ್ಯದ ಎಲ್ಲಾ ವಾಹನಗಳಿಗೂ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸುವುದನ್ನು ಕಡ್ಡಾಗೊಳಿಸಲಾಗಿದೆ. ವಂಚನೆ ಮತ್ತು ಕಳ್ಳತನದಿಂದ ರಕ್ಷಿಸಲು ಹೆಚ್ಚುವರಿ ಭದ್ರತಾ ಕ್ರಮಗಳನ್ನು ಒಳಗೊಂಡಿರುವ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅನ್ನು ಕಡ್ಡಾಯಾವಾಗಿ ಅಳವಡಿಸಬೇಕು ಎಂಬುದು ರಾಜ್ಯ ಸರ್ಕಾರದ ಸಾರಿಗೆ ಇಲಾಖೆ ನೀಡಿರುವ ಕಾರಣ.
ನಂಬರ್ ಪ್ಲೇಟ್ ಪಡೆಯುವುದು ಹೇಗೆ?
* https://transport.karnataka.gov.in ಅಥವಾ www.siam.in ಪೋರ್ಟಲ್‌ನಲ್ಲಿ ಲಾಗಿನ್ ಆಗಬೇಕು. ಇಲ್ಲಿ Book HSRP ಕ್ಲಿಕ್ ಮಾಡಿ.
* ನಿಮ್ಮ ವಾಹನ ತಯಾರಕ ಕಂಪನಿ ಆಯ್ಕೆ ಮಾಡಿ.
* ನಿಮ್ಮ ವಾಹನದ ವಿವರವನ್ನು ಅಲ್ಲಿ ನಮೂದಿಸಿ.
* ನಿಮ್ಮ ಹತ್ತಿರದ ಅಥವಾ ನಿಮ್ಮ ಡೀಲರ್ ಶೋ ರೂಂ ಆಯ್ಕೆ ಮಾಡಿ.
* ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್‌ಗೆ ಅಲ್ಲಿ ನಮೂದಿಸಿದ ಹಣವನ್ನು ಆನ್‌ಲೈನ್‌ನಲ್ಲಿ ಪಾವತಿ ಮಾಡಿ.
* ಮೊಬೈಲ್ ನಂಬರ್‌ಗೆ ಬರುವ ಒಟಿಪಿಯನ್ನು ನಮೂದಿಸಿ.
* ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸಲು ನಿಮ್ಮ ಅನುಕೂಲದ ದಿನಾಂಕವನ್ನು ಪಡೆದುಕೊಳ್ಳಿ