ಸಂವಿಧಾನ ಅಂಗೀಕಾರಕ್ಕೆ 75 ವರ್ಷಗಳು; ಸುಳ್ಯದಲ್ಲಿ ರಾಷ್ಟ್ರಧ್ವಜ ಗೌರವ ಯಾತ್ರೆಗೆ ಚಾಲನೆ

Most read

ಸುಳ್ಯ: ರಾಷ್ಟ್ರೀಯತೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಪ್ರಜಾಧ್ವನಿ ಕರ್ನಾಟಕ  ಹಮ್ಮಿಕೊಂಡಿರುವ ರಾಷ್ಟ್ರಧ್ವಜ ಗೌರವ ಯಾತ್ರೆಗೆ  ಸುಳ್ಯದ ತಹಶೀಲ್ದಾರರಾದ ಮಂಜುಳ  ಎಂ ರವರು  ಸಂಪಾಜೆಯಲ್ಲಿ ಸಂವಿಧಾನ ಪೀಠಿಕೆ ಮತ್ತು ರಾಷ್ಟ್ರಧ್ವಜಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಸಂವಿಧಾನದ ಮಹತ್ವ ಕುರಿತು ತಿಳಿಸಿಕೊಟ್ಟರು.

ಈ ಸಂದರ್ಭದಲ್ಲಿ ಪೊಲೀಸ್‌ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಂಘಸಂಸ್ಥೆಗಳ ಮುಖಂಡರು , ಪ್ರಜಾಧ್ವನಿ ಕರ್ನಾಟಕ  ಸಂಚಾಲಕ ಗೋಪಾಲ ಪೆರಾಜೆ ಮತ್ತು ಪ್ರಜಾಧ್ವನಿ ಸದಸ್ಯರು ಹಾಜರಿದ್ದರು.

1949 ನವಂಬರ್ 26 ರಂದು ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನ ರಚಿಸಿದರು. ಈ ಸಂವಿಧಾನದ ಸಮರ್ಪಣಾ ದಿನದ ನೆನಪಿಗಾಗಿ ಈ ಯಾತ್ರೆಯನ್ನು ಹಮ್ಮಿಕೊಂಡಿದೆ. ರಾಷ್ಟ್ರಧ್ವಜ ಯಾತ್ರೆಯು ಕಲ್ಲುಗುಂಡಿ, ಆರಂತೋಡು, ಮರ್ಕಂಜ, ಎಲಿಮಲೆ, ಗುತ್ತಿಗಾರು, ಸುಬ್ರಹ್ಮಣ್ಯ, ಪಂಜ, ನಿಂತಿಕಲ್ಲು, ಬೆಳ್ಳಾರೆ, ಐವರ್ನಾಡು, ಸೋಣಂಗೇರಿ, ಪೈಚಾರು ಮಾರ್ಗವಾಗಿ ಸಂಚರಿಸಲಿದೆ. ಸಂಜೆ 5 ಗಂಟೆಗೆ ಸುಳ್ಯದಲ್ಲಿ ಸಮಾವೇಶಗೊಳ್ಳಲಿದೆ. ಈ ಕಾರ್ಯಕ್ರಮದಲ್ಲಿ ಸುಳ್ಯ ಸಹಾಯಕ ಆಯುಕ್ತ ಜುಬಿನ್ ಮಹಾಪಾತ್ರ, ಖ್ಯಾತ ವಾಗ್ಮಿ ನಿಕೇತ್ ರಾಜ್ ಮೌರ್ಯ, ಸ್ಥಳಿಯ ಮುಖಂಡರಾದ ಹರಿಪ್ರಸಾದ್ ತುದಿಯಡ್ಕ, ಸಯದ್ ಆತಾಹ್ವಿರ್ ಸಾದಿ, ಫಾ. ವಿಕ್ಟರ್ ಡಿಸೋಜಾ ಹಾಗೂ ಪ್ರಜಾಧ್ವನಿ ಸಂಚಾಲಕ ಗೋಪಾಲ್ ಪೆರಜೆ ಭಾಗವಹಿಸಲಿದ್ದಾರೆ. ಕಾರ್ಯಕ್ರಮಕ್ಕೂ ಮುನ್ನ ಗಾಂಧಿನಗರದಲ್ಲಿರುವ ಮಹಾತ್ಮಗಾಂಧಿ ಪ್ರತಿಮೆಗೆ ಮಾಲಾರ್ಪಣೆ ನಡೆಯಲಿದೆ.
ಯಾತ್ರೆಯುದ್ದಕ್ಕೂ ಸಾರ್ವಜನಿಕರು, ಸಾಮಾಜಿಕ ಧುರೀಣರು ಹಾಗೂ ರಾಜಕೀಯ ಪಕ್ಷಗಳ ಮುಖಂಡರಿಂದ ರಾಷ್ಟ್ರಧ್ವಜಕ್ಕೆ ಪುಷ್ಪಾರ್ಚನೆ ನಡೆಯಲಿದೆ. ಯಾತ್ರೆಯುದ್ದಕ್ಕೂ ಸಂವಿಧಾನದ ಕುರಿತು ಗಣ್ಯರು ಭಾಷಣ ಮಾಡಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.

ಯಾತ್ರೆ ಸಾಗಿ ಬರುವ ಸ್ಥಳಗಳಲ್ಲಿ ಸಾರ್ವಜನಿಕರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸಬೇಕು ಎಂದು ಪ್ರಜಾಧ್ವನಿ ಸಂಘಟನೆ ಕೋರಿದೆ. ಈ ಸಂಘಟನೆಯು ಪಕ್ಷಾತೀತವಾಗಿದ್ದು ಯಾವುದೇ ರಾಜಕೀಯ ಪಕ್ಷ ಅಥವಾ ಧಾರ್ಮಿಕ ಸಂಘಟನೆಗಳಿಂದ ಹೊರತಾಗಿದೆ. ಕೇವಲ ಸಾರ್ವಜನಿಕರ ಮಧ್ಯೆ ರಾಷ್ಟ್ರೀಯತೆ ಮತ್ತು ಭಾವೈಕ್ಯತೆಯ ಕೊಂಡಿಯಾಗಲು ಮಾತ್ರ ಸಂಘಟನೆ ಬಯಸುತ್ತದೆ. ಸಂವಿಧಾನ ಕುರಿತು ಇನ್ನಷ್ಟು ವಿಚಾರಗಳನ್ನು ಅರಿಯುವ ಮುಖಾಂತರ ರಾಷ್ಟ್ರೀಯತೆಯನ್ನು ಬಲಗೊಳಿಸೋಣ ಎಂದು ಸಂಘಟನೆ ಮನವಿ ಮಾಡಿಕೊಂಡಿದೆ.

More articles

Latest article