ಲೋಕಾಯುಕ್ತ ದಾಳಿ; ಹಣದ ಕಟ್ಟನ್ನು ಕಿಟಕಿಯಿಂದ ಆಚೆ ಎಸೆದ ಎಂಜಿನಿಯರ್!‌

Most read

ಬೆಂಗಳೂರು: ಬೀದರ್, ಮೈಸೂರು, ಧಾರವಾಡ, ಬೆಳಗಾವಿ ಸೇರಿದಂತೆ ರಾಜ್ಯಾದ್ಯಂತ ವಿವಿಧ ಇಲಾಖೆಗಳ ಅಧಿಕಾರಿಗಳ ನಿವಾಸಗಳ ಮೇಲೆ ದಾಳಿ ನಡೆಸುವ ಮೂಲಕ ಲೋಕಾಯುಕ್ತ ಅಧಿಕಾರಿಗಳು ಬೆಳ್ಳಂಬೆಳಿಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಶಾಕ್ ನೀಡಿದ್ದಾರೆ.

ಹಾವೇರಿಯ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಹಿರೇಕೆರೂರು ಉಪ ವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್‌ ಕಾಶಿನಾಥ್‌ ಭಜಂತ್ರಿ ಅವರ ನಿವಾಸದ ಮೇಲೂ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇಲ್ಲಿನ ಬಸವೇಶ್ವರನಗರದ ಭಜಂತ್ರಿ ನಿವಾಸಕ್ಕೆ ಲೋಕಾಯುಕ್ತ ಎಸ್‌ ಪಿ ಕೌಲಾಪುರೆ ನೇತೃತ್ವದ ತಂಡ ದಾಳಿ ಮಾಡಿದೆ. ಬೆಳಗಿನ ಜಾವ ಅಧಿಕಾರಿಗಳು ಕಾಲಿಂಗ್‌ ಬೆಲ್‌ ಒತ್ತುತ್ತಿದ್ದಂತೆ ಲೋಕಾಯುಕ್ತ ಅಧಿಕಾರಿಗಳನ್ನು ನೋಡಿ ಭಜಂತ್ರಿ ಬೆಚ್ಚಿ ಬಿದ್ದಿದ್ದರು. ಕೂಡಲೇ ತಮ್ಮ ಕೊಠಡಿಗೆ ತೆರಳಿದ ಭಜಂತ್ರಿ 9 ಲಕ್ಷ ರೂ ಹಣದ ಕಟ್ಟನ್ನು ಶೌಚಾಲಯದ ಕಿಟಕಿ ಮೂಲಕ ಹೊರಗೆ ಎಸೆದಿದ್ದರು.

ಬೆಡ್‌ ಮೇಲೆ ಇದ್ದ 2ಲಕ್ಷ ರೂ. ಸೇರಿ 14ಲಕ್ಷ ರೂ ಹಣ ಪತ್ತೆಯಾಗಿದ್ದು ಅಪಾರ ಪ್ರಮಾಣದ ಚಿನ್ನಾಭರಣವೂ ಪತ್ತೆಯಾಗಿದೆ.

ಬೆಳಗಾವಿಯ ಮೂವರು ಅಧಿಕಾರಿಗಳ ನಿವಾಸಗಳ ಮೇಲೂ ಲೋಕಾಯುಕ್ತ ದಾಳಿ ನಡೆದಿದೆ. ಬೆಂಗಳೂರಿನ ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತ ವೆಂಕಟೇಶ ಮಜುಂದಾರ್‌ ಅವರ ಬೆಳಗಾವಿಯ ನಿವಾಸದ ಮೇಲೆ ದಾಳಿ ನಡೆದಿದೆ. ಈ ಹಿಂದೆ ಇಲ್ಲಿಯೇ ಕರ್ತವ್ಯ ನಿರ್ವಹಿಸಿದ್ದ ಇವರು ಇಲ್ಲಿಯೂ ಮನೆ ಖರೀದಿಸಿದ್ದರು.

ನಿಪಾಣಿ ತಾಲೂಕಿಇನ ಬೋರಗಾಂವ ಗ್ರಾಮ ಲೆಕ್ಕಧಿಕಾರಿ ವಿಠಲ ಶಿವಪ್ಪ ಅವರ ನಿವಾಸದ ಮೇಲೂ ದಾಳಿ ನಡೆದಿದೆ. ಇವರು ಮೂರು ತಿಂಗಳ ಹಿಂದೆಯಷ್ಟೇ ಅಕ್ರಮವಾಗಿ 1 ಕೋಟಿ ರೂ. ನಗದು ಹಣ ಸಾಗಿಸುವಾಗ ಸಿಕ್ಕಿ ಬಿದಿದ್ದರು. ಈ ಹಿನ್ನೆಲೆಯಲ್ಲಿ ಇಂದು ದಾಳಿ ನಡೆದಿದ್ದು ಹಲವಾರು ದಾಖಲೆಗಳು ಲಭ್ಯವಾಗಿವೆ ಎಂದು ತಿಳಿದು ಬಂದಿದೆ. ಧಾರವಾಡದ ಕೆಐಡಿಬಿ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್‌ ಗೋವಿಂದಪ್ಪ ಭಜಂತ್ರಿ ಅವರ ಅವರ ನಿವಾಸದ ಮೇಲೆ ಲೋಕಾಯುಕ್ತ ದಾಳಿ ನಡದಿದೆ. ಇವರ ಫಾರ್ಮ್‌ ಹೌಸ್‌, ಧಾರವಾಡದ ಮನೆ ಮೇಲೆ ದಾಳಿ ನಡೆದಿದೆ.  

ಮೈಸೂರು ಮಹಾನಗರ ಪಾಲಿಕೆಯ ವಲಯ ಸಹಾಯಕ ಆಯುಕ್ತರಾಗಿರುವ ನಾಗೇಶ್ ಅವರ ಕಚೇರಿ, ಮನೆ, ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದಲ್ಲಿರುವ ತೋಟದ ಮನೆ ಮೇಲೆ ದಾಳಿ ಮಾಡಲಾಗಿದೆ. ಮೈಸೂರು ಲೋಕಾಯುಕ್ತ ಎಸ್ಪಿ ಟಿ.ಜೆ.ಉದೇಶ್ ಮಾರ್ಗದರ್ಶನದಲ್ಲಿ ದಾಳಿ ನಡೆಸಿ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ.  ಬೀದರ್‌ ನಲ್ಲಿ ಬೀದರ್ ಜಿಲ್ಲಾ ತರಬೇತಿ ಕೇಂದ್ರದ ಸಹಾಯಕ ನಿರ್ದೇಶಕ ರವೀಂದ್ರಕುಮಾರ್ ರೊಟ್ಟಿ ಅವರ ನಿವಾಸದ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ಇವರ ಬೀದರ್ ಹಾಗೂ ಬೆಂಗಳೂರು ನಿವಾಸಗಳ ಮೇಲೆ ದಾಳಿ ಮಾಡಲಾಗಿದೆ.

More articles

Latest article