ಸಂತ್ರಸ್ತರು ಹಾಗೂ ಆರೋಪಿ ಇಬ್ಬರು ಲೈಂಗಿಕ ಕಿರುಕುಳ ಕೇಸ್ ನಲ್ಲಿ ರಾಜಿಯಾದರು ಆ ಪ್ರಕರಣವನ್ನು ರದ್ದು ಮಾಡಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಮಹತ್ವದ ಆದೇಶ ನೀಡಿದೆ.
ರಾಜಸ್ಥಾನದ ಶಿಕ್ಷಕನೊಬ್ಬನ ವಿರುದ್ಧ ಅಪ್ರಾಪ್ತ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದ ಪ್ರಕರಣ ದಾಖಲಾಗಿತ್ತು. ಬಳಿಕ ಶಿಕ್ಷಕ, ಸಂತ್ರಸ್ಥೆಯ ಕುಟುಂಬದ ಜೊತೆ ರಾಜಿಯಾಗಿದ್ದ. ಇದಾದ ನಂತರ ಶಿಕ್ಷಕನಿಗೆ ರಾಜಸ್ಥಾನ ಹೈಕೋರ್ಟ್ ಪ್ರಕರಣ ರದ್ದುಗೊಳಿಸಿತ್ತು. ಈ ಆದೇಶವನ್ನು ಸುಪ್ರೀಂ ಕೋರ್ಟ್ ತಳ್ಳಿಹಾಕಿದೆ. ಶಿಕ್ಷಕನ ವಿರುದ್ಧ ಕಾನೂನು ಕ್ರಮ ಜರುಗಿಸಲು ಆದೇಶಿಸಿದೆ.
2022ರಲ್ಲಿ ರಾಜಸ್ಥಾನದ ಗಂಗಾಪುರದಲ್ಲಿ ಅಪ್ರಾಪ್ತ ದಲಿತ ಬಾಲಕಿಯೊಬ್ಬಳು ಸರ್ಕಾರಿ ಶಾಲೆಯ ಶಿಕ್ಷಕನ ಮೇಲೆ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಳು. ಈ ಪ್ರಕರಣದಲ್ಲಿ ಪೋಕ್ಸೊ ಕಾಯಿದೆ ಮತ್ತು ಎಸ್‌ಸಿ, ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯ ಅಡಿ ಪ್ರಕರಣ ದಾಖಲಾಗಿತ್ತು. ಅಲ್ಲದೇ ಅಪ್ರಾಪ್ತೆಯ ಹೇಳಿಕೆಯನ್ನೂ ದಾಖಲಿಸಿಕೊಳ್ಳಲಾಗಿತ್ತು.
ಆರೋಪಿ ಶಿಕ್ಷಕ ವಿಮಲ್ ಕುಮಾರ್ ಗುಪ್ತಾ ಎಂಬಾತ ಬಾಲಕಿಯ ಕುಟುಂಬದೊಂದಿಗೆ ರಾಜೀ ಮಾಡಿಕೊಂಡು, ಸ್ಟಾಂಪ್ ಪೇಪರ್‌ನಲ್ಲಿ, ತಪ್ಪು ತಿಳುವಳಿಕೆಯಿಂದ ಪ್ರಕರಣ ದಾಖಲಿಸಲಾಗಿದೆ. ಶಿಕ್ಷಕರ ವಿರುದ್ಧ ಯಾವುದೇ ಕ್ರಮವನ್ನು ಬಯಸುವುದಿಲ್ಲ ಎಂದು ಬರೆಸಿಕೊಂಡಿದ್ದ. ಇದನ್ನು ಸ್ವೀಕರಿಸಿದ ಪೊಲೀಸರು ವರದಿ ಸಲ್ಲಿಸಿದ್ದರು. ಕೆಳ ನ್ಯಾಯಾಲಯವು ಈ ಹೇಳಿಕೆಯನ್ನು ತಿರಸ್ಕರಿಸಿತ್ತು. ಹೈಕೋರ್ಟ್ ಗೂ ಹೋಗಿದ್ದ ನಂತರ ಈ ಕೇಸ್ ವಜಾಗೊಳಿಸಿದ್ದರು. ನಂತರ ಸಾಮಾಜಿಕ ಕಾರ್ಯಕರ್ತ ರಾಮ್‌ಜಿ ಲಾಲ್ ಬೈರ್ವಾ ಅವರು ಈ ಹೈಕೋರ್ಟ್ ತೀರ್ಪನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಈಗ ಕೇಸ್ ಮತ್ತೆ ತಿರುವು ಪಡೆದಿದ್ದು ಶಿಕ್ಷಕನ ವಿರುದ್ಧ ಕಾನೂನು ಕ್ರಮ ಜರುಗಿಸಲು ಆದೇಶಿಸಿದೆ.