ತಿರುಪತಿಯಲ್ಲಿ ಹಿಂದೂಗಳಿಗೆ ಮಾತ್ರ ಕೆಲಸ, ಅನ್ಯ ಧರ್ಮಿಯರಿಗೆ ಸ್ವಯಂ ನಿವೃತ್ತಿ ಯೋಜನೆ: ಟಿಟಿಡಿ

Most read

ತಿರುಪತಿ ತಿರುಮಲ ದೇವಸ್ಥಾನದಲ್ಲಿ ಕೆಲಸ ಮಾಡುವ ಸಿಬ್ಬಂದಿಗಳು ಹಿಂದೂಗಳು ಮಾತ್ರ ಆಗಿರಬೇಕು. ಬೇರೆ ಧರ್ಮದವರಿಗೆ ವಿಆರ್‌ಎಸ್ ( ಸ್ವಯಂ ನಿವೃತ್ತಿ) ಕೊಡುವುದರ ಬಗ್ಗೆ ಸರ್ಕಾರದ ಜೊತೆ ಚರ್ಚಿಸಲಾಗುವುದು ಎಂದು ಟಿಟಿಡಿ ನೂತನ ಅಧ್ಯಕ್ಷ ಬಿ ಆರ್ ನಾಯ್ಡು ಹೇಳಿದ್ದಾರೆ.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಿರುಪತಿಯಲ್ಲಿ ಕೆಲಸ ಮಾಡುವ ಎಲ್ಲರೂ ಹಿಂದೂಗಳೇ ಆಗಿರಬೇಕು‌. ಇತರೆ ಧರ್ಮದ ಸಿಬ್ಬಂದಿಯನ್ನು ಹೇಗೆ ನಿಭಾಯಿಸಬೇಕು, ಅವರನ್ನು ಬೇರೆ ಸರ್ಕಾರಿ ಇಲಾಖೆಗಳಿಗೆ ಕಳುಹಿಸಬೇಕೇ ಅಥವಾ ವಿಆರ್‌ಎಸ್ (ಸ್ವಯಂ ನಿವೃತ್ತಿ ಯೋಜನೆ) ನೀಡಬೇಕೇ ಎಂಬ ಕುರಿತು ಆಂಧ್ರಪ್ರದೇಶ ಸರ್ಕಾರದೊಂದಿಗೆ ಚರ್ಚಿಸುವುದಾಗಿ ಹೇಳಿದ್ದಾರೆ.

ತಿರುಮಲದಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರೂ ಹಿಂದೂಗಳಾಗಿರಬೇಕು. ಅದು ನನ್ನ ಮೊದಲ ಪ್ರಯತ್ನವಾಗಿದೆ. ಇದರಲ್ಲಿ ಹಲವು ಸಮಸ್ಯೆಗಳಿವೆ. ನಾವು ಅದನ್ನು ಪರಿಶೀಲಿಸಬೇಕಾಗಿದೆ ಎಂದು ಅವರು ಹೇಳಿದರು.

ಮಂಡಳಿಯ ಮುಖ್ಯಸ್ಥರ ಜವಾಬ್ದಾರಿಯನ್ನು ನೀಡಿದ್ದಕ್ಕಾಗಿ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಮತ್ತು ರಾಜ್ಯದ ಎನ್‌ಡಿಎ ಸರ್ಕಾರದ ಇತರ ನಾಯಕರಿಗೆ ಅವರು ಧನ್ಯವಾದ ಅರ್ಪಿಸಿ ಈ ನಿರ್ಧಾರವನ್ನು ಕೈಗೊಂಡಿದ್ದಾರೆ.

ತಿರುಮಲ ತಿರುಪತಿಯಲ್ಲಿರುವ ಪ್ರಸಿದ್ಧ ಬಾಲಾಜಿ ದೇವಸ್ಥಾನವನ್ನು ನಿರ್ವಹಿಸುವ ತಿರುಮಲ ತಿರುಪತಿ ದೇವಸ್ಥಾನಮ್ (ಟಿಟಿಡಿ) ಗಾಗಿ ಆಂಧ್ರ ಪ್ರದೇಶ ಸರ್ಕಾರವು 24 ಸದಸ್ಯರೊಂದಿಗೆ ಹೊಸ ಮಂಡಳಿಯನ್ನು ಬುಧವಾರ ರಚಿಸಿದೆ.

More articles

Latest article