ಹಿಂದಿ ಹೇರಿಕೆ ವಿರೋಧಿಸಿ ತಿಥಿ ದಿವಸ್!

Most read

ಬೆಂಗಳೂರು : ಸೆ.14 ರಂದು ರಾಜ್ಯದಾದ್ಯಂತ ಕೇಂದ್ರ ಸರಕಾರಿ ಒಡೆತನದ ಸಂಸ್ಥೆಗಳಲ್ಲಿ ಹಿಂದಿ ದಿವಸ್ ಆಚರಣೆಗೆ ಸಜ್ಜಾಗುತ್ತಿವೆ. ನಿಮ್ಹಾನ್ಸ್ ಸೇರಿದಂತೆ ಹಲವು ಕೇಂದ್ರ ಸರಕಾರಿ ಒಡೆತನದ ಸಂಸ್ಥೆಗಳಲ್ಲಿ ಸೆ. 14ರಿಂದ 28ರವರೆಗೆ ಹಿಂದಿ ಸಪ್ತಾಹ, ಪಾಕ್ಷಿಕಗಳ ಮೂಲಕ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿಸಲಾಗುತ್ತಿದೆ. ಇದರ ಬೆನ್ನಲ್ಲೇ ರಾಜ್ಯದಾದ್ಯಂತ ಹಲವು ಕನ್ನಡ ಸಂಘಟನೆಗಳು ಹಿಂದಿ ದಿವಸ್ ವಿರೋಧಿಸಿ ಪ್ರತಿಭಟನೆ, ಪೋಸ್ಟರ್ ಪ್ರಚಾರ ಆರಂಭಿಸಿ ಪ್ರಬಲ ಪ್ರತಿರೋಧವನ್ನು ಒಡ್ಡುತ್ತಿವೆ.

“ಹಿಂದಿ ದಿವಸ್” ಗೆ ಪ್ರತಿಯಾಗಿ ರಾಜ್ಯದಾದ್ಯಂತ ಕನ್ನಡ ಸಂಘಟನೆಗಳಿಂದ ಪ್ರತಿರೋಧಗಳು ವ್ಯಕ್ತವಾಗುತ್ತಿವೆ. ಕರ್ನಾಟಕ ರಕ್ಷಣಾ ವೇದಿಕೆಯು  ಒಂದು ಹೆಜ್ಜೆ ಮುಂದೆ ಹೋಗಿ ಸೆ. 14 ರಂದು ಹಿಂದಿ ದಿನಕ್ಕೆ ಪ್ರತಿಯಾಗಿ “ಹಿಂದಿ ತಿಥಿ ದಿವಸ್” ಆಚರಣೆ ಮೂಲಕ ತಮ್ಮ ವಿರೋಧವನ್ನು ದಾಖಲಿಸಲಿದ್ದಾರೆ.

ಹಿಂದಿ ದಿವಸ್ ವಿರೋಧದ ಭಾಗವಾಗಿ ಹಿಂದಿ ಹೇರಿಕೆ ವಿರೋಧಿ ಕರ್ನಾಟಕ ಶುಕ್ರವಾರ  ನಗರದ ಎಸ್.ಬಿ.ಐ ಮುಖ್ಯ ಕಚೇರಿ ಎದುರು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ನಿರ್ಮಾಪಕ ಸಾ.ರಾ. ಗೋವಿಂದು ಮತ್ತು ಕೆ.ಎಸ್.ಆರ್.ಟಿ.ಸಿ  ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷ ವಾ.ಚಾ. ಚನ್ನೇಗೌಡ ಅವರು ಪಾಲ್ಗೊಂಡು ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ.

ಹಿಂದಿ ಹೇರಿಕೆ ವಿರೋಧಿ ಕರ್ನಾಟಕ ಸಂಘಟನೆಯು ಸೆ.14 ರಂದು ಸಹ ನಗರದ ಕೆಂಪೇಗೌಡ ರಸ್ತೆಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮುಖ್ಯ ಕಚೇರಿ ಎದುರು ಪ್ರತಿಭಟನೆಯನ್ನು ಹಮ್ಮಿಕೊಂಡಿದೆ.  ಕರವೇ ನಾರಾಯಣಗೌಡ ಬಣ ಹರಿಬಿಟ್ಟಿರುವ ಹಿಂದಿ ಹೇರಿಕೆ ವಿರೋಧಿಸುವ ಹಲವು ಪೋಸ್ಟರ್ ಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ.

ಭಾರತ ಒಕ್ಕೂಡ ವ್ಯವಸ್ಥೆಯಲ್ಲಿ ಸಂವಿಧಾನಿಕ ಮಾನ್ಯತೆ ಪಡೆದ ಎಲ್ಲ 22 ಭಾಷೆಗಳು ಸಮಾನ ಮಾನ್ಯತೆಯನ್ನು ಪಡೆದಾಗಿಯೂ ಹಿಂದಿ ದಿವಸ್ ಆಚರಿಸುವ ಮೂಲಕ ಹಿಂದಿಯೇತರ ರಾಜ್ಯಗಳಲ್ಲಿ ಹಿಂದಿ ಹೇರಿಕೆ ಮಾಡಲಾಗುತ್ತಿದೆ. ಸೆ.14 ರಂದು ಹಿಂದಿ ದಿವಸ್ ಹೆಸರಿನಲ್ಲಿ ಕೇಂದ್ರದ ಹಿಂದಿ ಹೇರಿಕೆ ವಿರೋಧಿಸಿ ರಾಜ್ಯದಾದ್ಯಂತ ಪ್ರಬಲ ವಿರೋಧಗಳು ವ್ಯಕ್ತವಾಗುತ್ತಿವೆ. ಪ್ರತಿಭಟನೆಯ ಕಾವು ದಿನದಿಂದ ದಿನಕ್ಕೆ ಹೆಚ್ಚಾಗಿ ಕನ್ನಡಿಗರಲ್ಲಿ ಒಂದು ಜಾಗೃತ ಪ್ರಜ್ಞೆಯನ್ನುಮೂಡಿಸುತ್ತಿರುವುದು ಸುಳ್ಳಲ್ಲ.

More articles

Latest article