ನೋಡನೋಡುತ್ತಿದ್ದಂತೆ ಕುಸಿದ ಗುಡ್ಡ: ಶಿರಾಡಿ ಘಾಟ್‌ ಮತ್ತೆ ಬಂದ್

Most read

ಸಕಲೇಶಪುರ: ಪದೇಪದೇ ಭೂಕುಸಿತ ಸಂಭವಿಸುತ್ತಿರುವ ದೊಡ್ಡತಪ್ಲು ಬಳಿ ನೋಡ ನೋಡುತ್ತಲೇ ಮತ್ತೆ ಭೂ ಕುಸಿತ ಉಂಟಾದ ಘಟನೆ ನಡೆದಿದ್ದು, ಆತಂಕಕ್ಕೆ ಕಾರಣವಾಗಿದೆ.

ನಿನ್ನೆಯಷ್ಟೆ ಗುಡ್ಡ ಕುಸಿತದಿಂದ ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟ್ ಬಂದ್ ಮಾಡಿ, ರಸ್ತೆ ಸಂಚಾರವನ್ನು ನಿಲ್ಲಿಸಲಾಗಿತ್ತು. ಇಂದು ರಸ್ತೆಯಲ್ಲಿದ್ದ ಮಣ್ಣು ತೆಗೆದು ರಸ್ತೆಯನ್ನು ಸಂಚಾರಕ್ಕೆ ತೆರವುಗೊಳಿಸಲಾಗಿತ್ತು. ಇದೀಗ ಮತ್ತೆ ಭೂಕುಸಿತ ಸಂಭವಿಸಿದ ಹಿನ್ನೆಲೆಯಲ್ಲಿ ಮತ್ತೆ ರಸ್ತೆ ಬಂದ್‌ ಮಾಡಲಾಗಿದೆ.

ಸಕಲೇಶಪುರ ಸಮೀಪದಲ್ಲಿ ಹೊಸದಾಗಿ ನಿರ್ಮಿಸಲಾದ ಚತುಷ್ಪಥ ಹೆದ್ದಾರಿ ನಿರ್ಮಾಣಕ್ಕೆ ಅವೈಜ್ಞಾನಿಕವಾಗಿ ಗುಡ್ಡಗಳನ್ನು ಕಡಿದ ಹಿನ್ನೆಲೆಯಲ್ಲಿ ಈ ಬಾರಿಯ ಮಳೆಗಾಲದಲ್ಲಿ ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿತ ಸಂಭವಿಸುತ್ತಿದೆ. ದೊಡ್ಡತಪ್ಲು ಗ್ರಾಮದ ಬಳಿ 90 ಡಿಗ್ರಿ ಕೋನದಲ್ಲಿ ಗುಡ್ಡ ಕತ್ತರಿಸಿದ ಹಿನ್ನೆಲೆಯಲ್ಲಿ ಪದೇಪದೇ ಗುಡ್ಡ ಕುಸಿತ ಸಂಭವಿಸುತ್ತಿದೆ. ರಸ್ತೆ ಗುತ್ತಿಗೆ ಪಡೆದಿರುವ ರಾಜ್‌ ಕಮಲ್‌ ಸಂಸ್ಥೆ ಬೇಕಾಬಿಟ್ಟಿ ಕಾಮಗಾರಿ ನಡೆಸಿದ್ದು, ಹೊಸದಾಗಿ ಹಾಕಿರುವ ರಸ್ತೆ ಎಲ್ಲ ಕಡೆ ಕಿತ್ತು ಬಂದಿದೆ. ತಡೆಗೋಡೆಗಳು ಕುಸಿಯುತ್ತಿವೆ.

ಇಂದು ರಸ್ತೆ ಸಂಚಾರ ಆರಂಭಗೊಂಡ ಕೆಲಹೊತ್ತಿನಲ್ಲೇ ದೊಡ್ಡ ಸದ್ದಿನೊಂದಿಗೆ ಗುಡ್ಡ ಕುಸಿದಿದ್ದು, ಈ ದೃಶ್ಯ ಸ್ಥಳದಲ್ಲಿದ್ದವರ ಮೊಬೈಲ್‌ ಗಳಲ್ಲಿ ಸೆರೆಯಾಗಿದೆ.

ಕಳೆದ ಮೂರು ದಿನಗಳಿಂದ ಸಕಲೇಶಪುರದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ದೊಡ್ಡತಪ್ಲು ಬಳಿ ಸತತ ಮೂರನೇ ದಿನ ಗುಡ್ಡ ಕುಸಿತ ಸಂಭವಿಸಿದೆ. ಹೀಗಾಗಿ ಶಿರಾಡಿ ಘಾಟ್‌ ಮತ್ತೆ ಬಂದ್‌ ಆಗಿದೆ.

More articles

Latest article