ಹೊಸದಿಲ್ಲಿ: ಸುಪ್ರೀಂ ಕೋರ್ಟ್ ಸಂವಿಧಾನ ಪೀಠ ತನ್ನ ಚಾರಿತ್ರಿಕ ತೀರ್ಪಿನಲ್ಲಿಂದು ಮೀಸಲಾತಿ ವರ್ಗದ ಗುಂಪುಗಳನ್ನು ಉಪ-ವರ್ಗೀಕರಿಸುವ ರಾಜ್ಯಗಳಿಗೆ ಅಧಿಕಾರವಿದೆ ಎಂದು ಹೇಳುವುದರೊಂದಿಗೆ ಬಹುಚರ್ಚೆಯಲ್ಲಿರುವ ಒಳಮೀಸಲಾತಿ ನೀಡಿಕೆಗೆ ಇರುವ ಅಡ್ಡಿಗಳನ್ನು ನಿವಾರಿಸಿದೆ.
ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳಲ್ಲಿ (SC/STಗಳು) ಮೀಸಲಾತಿಯ ಪ್ರಯೋಜನಗಳನ್ನು ಹಿಂದುಳಿದಿರುವಿಕೆಯ ಆಧಾರದಲ್ಲಿ ವಿವಿಧ ಗುಂಪುಗಳಾಗಿ ವಿಂಗಡಿಸಿ ಒಳಮೀಸಲಾತಿ ಕಲ್ಪಿಸಲು ರಾಜ್ಯಗಳಿಗೆ ಅಧಿಕಾರ ದೊರೆತಂತಾಗಿದೆ.
ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರ ನೇತೃತ್ವದ, ನ್ಯಾಯಮೂರ್ತಿಗಳಾದ ಬಿಆರ್ ಗವಾಯಿ, ವಿಕ್ರಮ್ ನಾಥ್, ಬೇಲಾ ಎಂ ತ್ರಿವೇದಿ, ಪಂಕಜ್ ಮಿಥಾಲ್, ಮನೋಜ್ ಮಿಶ್ರಾ ಮತ್ತು ಸತೀಶ್ ಚಂದ್ರ ಶರ್ಮಾ ಅವರನ್ನೊಳಗೊಂಡ ಏಳು ನ್ಯಾಯಾಧೀಶರ ಸಂವಿಧಾನ ಪೀಠವು ಆಂಧ್ರ ಪ್ರದೇಶ ಸರ್ಕಾರದ ತೀರ್ಮಾನದ ವಿರುದ್ಧ 2005 ರಲ್ಲಿ ನೀಡಲಾಗಿದ್ದ ತೀರ್ಪನ್ನು ತಳ್ಳಿಹಾಕುವ ಮೂಲಕ ಹೊಸ ಆದೇಶವನ್ನು ಬರೆದಿದೆ.
ಏಳು ನ್ಯಾಯಾಧೀಶರ ಪೈಕಿ, ನ್ಯಾಯಮೂರ್ತಿ ತ್ರಿವೇದಿ ಮಾತ್ರ ಉಪ ವರ್ಗೀಕರಣವನ್ನು ಅನುಮತಿಸಲಾಗುವುದಿಲ್ಲ ಎಂದು ಹೇಳಿದ್ದಾರೆ.
“ಎಸ್ಸಿ/ಎಸ್ಟಿ ಸಮುದಾಯಗಳು ಎದುರಿಸುತ್ತಿರುವ ವ್ಯವಸ್ಥಿತ ತಾರತಮ್ಯದಿಂದಾಗಿ ಪ್ರಗತಿ ಸಾಧಿಸಲು ಸಾಧ್ಯವಾಗುವುದಿಲ್ಲ. ಸಂವಿಧಾನದ 14ನೇ ವಿಧಿಜಾತಿಯ ಉಪ-ವರ್ಗೀಕರಣವನ್ನು ಅನುಮತಿಸುತ್ತದೆ. ಎಂದು ಪೀಠವು ತನ್ನ ಬಹುಮತದ ತೀರ್ಪನ್ನು ಪ್ರಕಟಿಸಿದೆ,
ಒಂದು ರಾಜ್ಯವು ಉಪ-ವರ್ಗೀಕರಣವನ್ನು ಮಾಡಿದಾಗ, ಅದನ್ನು ವೈಜ್ಞಾನಿಕವಾದ ದತ್ತಾಂಶಗಳನ್ನು ಹೊಂದಿರಬೇಕು. ಉಪ ವರ್ಗೀಕರಣ ರಾಜಕೀಯ ಉದ್ದೇಶಗಳನ್ನು ಪೂರೈಸುವ ಕ್ರಿಯೆ ಆಗಬಾರದು ಎಂದು ಸುಪ್ರೀಂ ಕೋರ್ಟ್ ಎಚ್ಚರಿಕೆಯನ್ನೂ ನೀಡಿದೆ.
ಪೀಠದಲ್ಲಿದ್ದ ಏಳು ನ್ಯಾಯಾಧೀಶರಲ್ಲಿ ನಾಲ್ವರು ನ್ಯಾಯಮೂರ್ತಿಗಳಾದ ಬಿಆರ್ ಗವಾಯಿ, ವಿಕ್ರಮ್ ನಾಥ್, ಪಂಕಜ್ ಮಿಥಾಲ್ ಮತ್ತು ಸತೀಶ್ ಚಂದ್ರ ಶರ್ಮಾ ಎಸ್ಸಿ/ಎಸ್ಟಿ ವರ್ಗದಲ್ಲಿ ಕೆನೆ ಪದರವನ್ನು ಗುರುತಿಸುವ ಅಗತ್ಯವಿದೆ ಎಂದು ತಮ್ಮ ಪ್ರತ್ಯೇಕ ತೀರ್ಪುಗಳಲ್ಲಿ ಹೇಳಿದ್ದಾರೆ.
“ರಾಜ್ಯವು ಎಸ್ಸಿ ಎಸ್ಟಿ ವರ್ಗದಲ್ಲಿ ಕೆನೆಪದರವನ್ನು ಗುರುತಿಸುವ ನೀತಿಯನ್ನು ರೂಪಿಸಬೇಕು ಮತ್ತು ಕೆನೆಪದರದಲ್ಲಿ ಇರುವವರನ್ನು ಮೀಸಲಾತಿ ಪಟ್ಟಿಯಿಂದ ಹೊರಗೆ ಇಡಬೇಕು, ನಿಜವಾದ ಸಮಾನತೆ ಪಡೆಯಲು ಇದು ಏಕೈಕ ಮಾರ್ಗವಾಗಿದೆ” ಎಂದು ನ್ಯಾಯಮೂರ್ತಿ ಗವಾಯಿ ಅವರು ತಮ್ಮ ಸಹಮತದ ಆದರೆ ಪ್ರತ್ಯೇಕ ತೀರ್ಪಿನಲ್ಲಿ ಹೇಳಿದ್ದಾರೆ.
ಒಬಿಸಿಗಳಿಗೆ ಅನ್ವಯವಾಗುವ ಕೆನೆ ಪದರದ ತತ್ವವು ಎಸ್ಸಿಗಳಿಗೂ ಅನ್ವಯಿಸಬೇಕು ಆದರೆ ಎಸ್ಸಿಗಳ ಕೆನೆ ಪದರವನ್ನು ಮೀಸಲಾತಿ ವ್ಯಾಪ್ತಿಯಿಂದ ಹೊರಗಿಡುವ ಮಾನದಂಡಗಳು ಒಬಿಸಿಗಳಿಗೆ ಅನ್ವಯಿಸುವುದಕ್ಕಿಂತ ಭಿನ್ನವಾಗಿರಬಹುದು ಎಂದು ನ್ಯಾಯಮೂರ್ತಿ ನ್ಯಾಯಮೂರ್ತಿ ವಿಕ್ರಮ್ ನಾಥ್ ತಮ್ಮ ತೀರ್ಪಿನಲ್ಲಿ ಹೇಳಿದ್ದಾರೆ.
“ಕೆನೆ ಪದರದ ತತ್ವವು ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳಿಗೂ ಅನ್ವಯಿಸುತ್ತದೆ , ಆದರೆ ಇದಕ್ಕೆ ರೂಪಿಸಬೇಕಾದ ಮಾನದಂಡಗಳು ಇತರ ಮಾನದಂಡಗಳಿಗಿಂತ ಭಿನ್ನವಾಗಿರಬಹುದು ಎಂಬ ನ್ಯಾಯಮೂರ್ತಿ ಗವಾಯಿ ಅವರ ಅಭಿಪ್ರಾಯವನ್ನು ನಾನೂ ಸಹ ಒಪ್ಪುತ್ತೇನೆ ಎಂದು ನ್ಯಾಯಮೂರ್ತಿ ನಾಥ್ ಹೇಳಿದ್ದಾರೆ. ನ್ಯಾಯಮೂರ್ತಿ ಮಿಥಾಲ್ ಕೂಡ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
“ಮೀಸಲಾತಿಯು ಒಂದು ವರ್ಗದಲ್ಲಿ ಮೊದಲ ಪೀಳಿಗೆಗೆ ಮಾತ್ರ ಮೀಸಲಿಡಬೇಕು ಮತ್ತು ಎರಡನೇ ತಲೆಮಾರು ಬಂದರೆ ಮೀಸಲಾತಿಯ ಪ್ರಯೋಜನಗಳನ್ನು ನೀಡಬಾರದು. ಎಸ್ಸಿ/ಎಸ್ಟಿಗಳಲ್ಲಿ ಕೆನೆ ಪದರವನ್ನು ಗುರುತಿಸುವುದು ಸಾಂವಿಧಾನಿಕ ಕಡ್ಡಾಯವಾಗಬೇಕು ಎಂದು .ನ್ಯಾಯಮೂರ್ತಿ ಶರ್ಮಾ ಕೂಡ ತೀರ್ಪಿನಲ್ಲಿ ಹೇಳಿದ್ದಾರೆ.
ಈ ಐತಿಹಾಸಿಕ ತೀರ್ಪಿನಿಂದಾಗಿ ಪಂಜಾಬ್, ತಮಿಳುನಾಡು ಮತ್ತು ಇತರ ರಾಜ್ಯಗಳಲ್ಲಿ ಒಳಮೀಸಲಾತಿ ಒದಗಿಸುವ ಕಾನೂನುಗಳ ಸಿಂಧುತ್ವವನ್ನು ಎತ್ತಿಹಿಡಿದಂತಾಗಿದೆ.