ಬೆಂಗಳೂರು: ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಭದ್ರಾವತಿಯ ಮೈಸೂರ್ ಪೇಪರ್ ಮಿಲ್ (ಎಂಪಿಎಂ) ಕಾರ್ಖಾನೆಗೆ ನೀಡಲಾದ ಮಲೆನಾಡಿನ ಪಶ್ಚಿಮಘಟ್ಟ ಪ್ರದೇಶದ ಸುಮಾರು 20005.42 ಹೆಕ್ಟೇರ್ ಪ್ರದೇಶದ ಮರುಗುತ್ತಿಗೆಯನ್ನು ರದ್ದುಪಡಿಸಬೇಕು ಹಾಗೂ ಪರಿಸರಕ್ಕೆ ಮಾರಕವಾಗಿರುವ ನೀಲಗಿರಿ, ಅಕೇಶಿಯಾಗಳನ್ನು ನಿಷೇಧಿಸಬೇಕು ಎಂದು ಆಗ್ರಹಿಸಿ ಶಿವಮೊಗ್ಗದ “ನಮ್ಮೂರಿಗೆ ಅಕೇಶಿಯಾ ಮರ ಬೇಡ” ಹೋರಾಟ ಒಕ್ಕೂಟದ ಸದಸ್ಯರು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರಿಗೆ ಮನವಿ ಸಲ್ಲಿಸಿದರು.
ಮಲೆನಾಡಿನ ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳ ಒಟ್ಟು, 33,000 ಹೆಕ್ಟೇರ್ ಸ್ವಾಭಾವಿಕ ಅರಣ್ಯ ಭೂಮಿಯನ್ನು ಸರ್ಕಾರ 1980ರಲ್ಲಿ ಎಂಪಿಎಂ ಕಾರ್ಖಾನೆಗೆ 40 ವರ್ಷಗಳ ಅವಧಿಗೆ ಲೀಸ್ ನೀಡಲಾಗಿತ್ತು. ಕೆಲವು ವರ್ಷಗಳ ನಂತರ ಇದರಲ್ಲಿ ಕೆಲ ಪ್ರದೇಶ ವನ್ಯಜೀವಿ ವಿಭಾಗದ ಅರಣ್ಯವೆಂದು ಕೆಲ ಪ್ರದೇಶವನ್ನು ಕೈಬಿಟ್ಟು 20005.42 ಹೆಕ್ಟೇರ್್ ಪ್ರದೇಶವನ್ನು ಮುಂದುವರಿಸಿತ್ತು. ಸದರಿ ಗುತ್ತಿಗೆ ಅವಧಿಯು 12-08-2020 ಕ್ಕೆ ಅಂತ್ಯವಾಗಿದೆ. ಭದ್ರಾವತಿಯ ಎಂಪಿಎಂ ಕಾಗದ ಕಾರ್ಖಾನೆ 2015ರ ನವೆಂಬರ್ ನಲ್ಲೇ ಕಾರ್ಯ ಸ್ಥಗಿತಗೊಳಿಸಿರುತ್ತಿದೆ. ಹಾಲಿ ಕಾರ್ಖಾನೆಯಲ್ಲಿ 20 ರಿಂದ 25 ಜನ ಕೆಲಸಗಾರರು ಮಾತ್ರ ಕೆಲಸ ನಿರ್ವಹಿಸುತ್ತಿದ್ದಾರೆ.
ಹೀಗಿದ್ದರೂ ಹಿಂದಿನ ಬಿಜೆಪಿ ಸರಕಾರ ಸದರಿ 20005.42 ಹೆಕ್ಟೇರ್ ಅರಣ್ಯ ಭೂಮಿಯನ್ನು ಸ್ಥಗಿತಗೊಂಡ ಭದ್ರಾವತಿ ಎಂಪಿಎಂ ಕಾರ್ಖಾನೆಯ ಹೆಸರಿಗೆ ಮತ್ತೆ ಲೀಸ್ ನೀಡಿದೆ. ಅರಣ್ಯ ಭೂಮಿಯನ್ನು ಖಾಸಗೀಕರಣ ಮಾಡುವುದು ಸರಕಾರದ ದುರುದ್ದೇಶವಾಗಿದ್ದು, ಈ ಮರುಗುತ್ತಿಗೆಯನ್ನು ಈ ಕೂಡಲೇ ರದ್ದುಪಡಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.
ಗುತ್ತಿಗೆ ಶರತ್ತುಗಳನ್ನು ಗಾಳಿಗೆ ತೂರಿದ ಎಂಪಿಎಂ
ಅರಣ್ಯ ಭೂಮಿಯನ್ನು ಭದ್ರಾವತಿಯ ಎಂಪಿಎಂ ಕಾರ್ಖಾನೆಗೆ ನೀಡುವಾಗ, ಅವಧಿ ಮುಗಿದ ನಂತರ ಅರಣ್ಯ ಇಲಾಖೆಗೆ ಸದರಿ ಭೂಮಿಯನ್ನು ಹಿಂದಿರುಗಿಸಬೇಕು ಮತ್ತು ಒಂದೊಮ್ಮೆ ಸರ್ಕಾರ ಕಾರ್ಖಾನೆಯನ್ನು ಖಾಸಗಿಯವರಿಗೆ ಮಾರಾಟ ಮಾಡಿದರೆ ಎಂಪಿಎಂ ಗೆ ಲೀಸ್ ಮೂಲಕ ನೀಡಿರುವ ಅರಣ್ಯ ಭೂಮಿಯನ್ನು ಖಾಸಗಿಯವರಿಗೆ ನೀಡುವಂತಿಲ್ಲ ಎಂಬ ಷರತ್ತಿನೊಂದಿಗೆ ಸರಕಾರ ಈ ಅರಣ್ಯ ಭೂಮಿಯನ್ನು ಕಾರ್ಖಾನೆಗೆ ನೀಡಿತ್ತು. ಹೀಗೆ ಷರತ್ತುಬದ್ಧವಾಗಿ ಪಡೆದ ಭೂಮಿಯಲ್ಲಿ ಒಟ್ಟು 525 ಏಕ ಜಾತಿಯ ನೆಡುತೋಪುಗಳನ್ನು ಮಾಡಲಾಗಿದೆ. ಅದರಲ್ಲಿ ಅಕೇಶಿಯಾ ಮತ್ತು ನೀಲಗಿರಿ ಗಿಡಗಳನ್ನು ಬೆಳೆಯಲಾಗಿದೆ. ಇವುಗಳು ಪಶ್ಚಿಮಘಟ್ಟದಲ್ಲಿರುವ ನಿತ್ಯಹರಿದ್ವರ್ಣದ ಸ್ವಾಭಾವಿಕ ಅರಣ್ಯಕ್ಕೆ ವ್ಯತಿರಿಕ್ತವಾದ ಸಸ್ಯರಾಶಿಯಾಗಿದ್ದು, ಇವು ಪ್ರಕೃತಿ ವಿರೋಧಿ ಸಸ್ಯರಾಶಿಯಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಹೋರಾಟವನ್ನು ಕಡೆಗಣಿಸಿ ಲೀಸ್ ವಿಸ್ತರಣೆ
ಕಾರ್ಖಾನೆ ಸ್ಥಗಿತಗೊಂಡು 9 ವರ್ಷ ಕಳೆದಿವೆ. ಅಲ್ಲಿನ ಕಾರ್ಮಿಕರಿಗೆ ಎಲ್ಲ ಬಗೆಯ ವೇತನ, ಸೌಲಭ್ಯ ವಿಲೇವಾರಿ ಆಗಿದೆ. ಕಾರ್ಖಾನೆಯನ್ನು ಸರ್ಕಾರ ತನ್ನ ಒಡೆತನದಲ್ಲಿ ನಡೆಸಲು ಆಸಕ್ತಿ ತೋರಿಲ್ಲ. ಕಾರ್ಖಾನೆಯ ಎಲ್ಲ ಯಂತ್ರಗಳು ಸಂಪೂರ್ಣ ಹಾಳಾಗಿವೆ. ಕಾರ್ಖಾನೆ ಮತ್ತು ಪುನಾರಂಭವಾಗುವ ಮುನ್ಸೂಚನೆಗಳೂ ಇಲ್ಲ. ಹಿಂದಿನ ಸರಕಾರ ಕಾರ್ಖಾನೆಯನ್ನು ಖಾಸಗಿಯವರಿಗೆ ನೀಡುವ ಇಚ್ಛೆ ತೋರಿ ಟೆಂಡರ್ ಕೂಡ ಕರೆದಿತ್ತು. ಇದೇ ಸಮಯದಲ್ಲಿ ನಿಯಮ ಮೀರಿ ಕಚ್ಚಾ ವಸ್ತು ಬೆಳೆಯಲು 40 ವರ್ಷ ಸದರಿ ಅರಣ್ಯ ಪ್ರದೇಶವನ್ನು ಲೀಸ್ ನೀಡಲು ಪ್ರಯತ್ನಿಸಿತ್ತು. ಈ ಬಗ್ಗೆ ಆಗಿನ ಮುಖ್ಯಮಂತ್ರಿಗಳು ಕರೆದ ಸಭೆಯಲ್ಲಿ ಸಂಘಟನೆಯ ವತಿಯಿಂದ ಪರಿಸರಕ್ಕೆ ಮಾರಕವಾಗಿರುವ ಈ ಗುತ್ತಿಗೆ ವಿಸ್ತರಣೆಯನ್ನು ವಿರೋಧಿಸಿ ಮುಖ್ಯಮಂತ್ರಿಗಳಿಗೆ ಪತ್ರ ಬರೆಯಲಾಗಿತ್ತು. ಶಿವಮೊಗ್ಗ ಜಿಲ್ಲಾ ಕೇಂದ್ರದಲ್ಲಿ ಹೋರಾಟ ಧರಣಿಗಳನ್ನೂ ನಡೆಸಲಾಗಿತ್ತು. ಆದರೆ ಮಲೆನಾಡಿನ ಜನರ ವಿರುದ್ಧವಾಗಿ ಸರಕಾರ ನಡೆದುಕೊಂಡಿತು. ಆಗ ವಿರೋಧಪಕ್ಷದ ನಾಯಕರಾಗಿದ್ದ ಸಿಎಂ ಸಿದ್ದರಾಮಯ್ಯನವರಿಗೂ ಮನವಿ ಸಲ್ಲಿಸಲಾಗಿತ್ತು. ಸಂಘಟನೆಯ ಮನವಿಯನ್ನು ಉಲ್ಲೇಖಿಸಿ ಅವರೂ ಸಹ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದರು. ಆದರೆ ಇದ್ಯಾವುದನ್ನೂ ಲೆಕ್ಕಿಸದೆ ಆಗಿನ ಸರಕಾರ 21-11-2020 ರಂದು ಸದರಿ 20005.42 ಹೆಕ್ಟೇರ್ ಅರಣ್ಯ ಪ್ರದೇಶವನ್ನು ಕಾರ್ಖಾನೆಗೆ ಮತ್ತೆ ಲೀಸ್ ನೀಡಿದೆ ಎಂದು ಆರೋಪಿಸಲಾಗಿದೆ.
ಪ್ರಸ್ತುತ ಸರಕಾರ ಈ ಗುತ್ತಿಗೆಯನ್ನು ರದ್ದುಪಡಿಸಿ, ಪರಿಸರಕ್ಕೆ ಮಾರಕವಾಗಿರುವ ಅಕೇಶಿಯಾ, ನೀಲಗಿರಿಯನ್ನು ನಿಷೇಧಿಸಬೇಕು ಎಂದು ಸಂಘಟನೆಯ ಸದಸ್ಯರು ಅರಣ್ಯ ಸಚಿವರನ್ನು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಸಂಘಟನೆ ಪದಾಧಿಕಾರಿಗಳಾದ ಕೆ.ಪಿ. ಶ್ರೀಪಾಲ, ಕೆ.ಟಿ. ಗಂಗಾಧರ್, ಪ್ರೊ. ರಾಜೇಂದ್ರ ಚೆನ್ನಿ, ಎಂ. ಗುರುಮೂರ್ತಿ, ರಾಜೇಂದ್ರ ಕಂಬಳಿಗೆರೆ, ಶೇಖರ್ ಗೌಳೇರ್, ಎಚ್.ಎ. ಕೃಷ್ಣಮೂರ್ತಿ, ರಾಘವೇಂದ್ರ ಹೆಚ್.ಬಿ. ಅಖಿಲೇಶ ಚಿಪ್ಳಿ ಇನ್ನಿತರರು ಇದ್ದರು.