ಕೈಗೆಟಕುವ ದರದಲ್ಲಿ ಗುಣಮಟ್ಟದ ಆಹಾರವನ್ನು ವಿತರಿಸುವ ಉದ್ದೇಶದಿಂದ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ‘ಭಾರತ್ ರೈಸ್’ ಯೋಜನೆಯನ್ನು ಜುಲೈನಿಂದ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಈ ಯೋಜನೆಯಡಿ ಅಕ್ಕಿಯನ್ನು ಕೆ.ಜಿ.ಗೆ ₹ 29, ಗೋಧಿ ಹಿಟ್ಟು ₹ 27.50 ಮತ್ತು ಬೇಳೆಕಾಳುಗಳನ್ನು ಕೆ.ಜಿ.ಗೆ ₹ 60 ರಂತೆ ಮಾರಾಟ ಮಾಡಲಾಗುತ್ತಿತ್ತು.
2024ರ ಸಾರ್ವತ್ರಿಕ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಫೆಬ್ರವರಿ 2, 2024 ರಂದು ಪ್ರಾರಂಭವಾದ ‘ಭಾರತ್ ರೈಸ್’ ಯೋಜನೆಯು ಸಾಮಾನ್ಯ ಜನರಿಗೆ ಕಡಿಮೆ ಬೆಲೆಯಲ್ಲಿ ಗುಣಮಟ್ಟದ ಆಹಾರವನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ ಎಂದು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹೇಳಿಕೊಂಡಿತ್ತು. ನ್ಯಾಶನಲ್ ಅಗ್ರಿಕಲ್ಚರಲ್ ಕೋಆಪರೇಟಿವ್ ಮಾರ್ಕೆಟಿಂಗ್ ಫೆಡರೇಶನ್ ಆಫ್ ಇಂಡಿಯಾ ಲಿಮಿಟೆಡ್ (NAFED) ಮೇಲ್ವಿಚಾರಣೆಯಲ್ಲಿ ಈ ಯೋಜನೆಯನ್ನು ಜಾರಿ ಮಾಡಿ ಜೂನ್ 10 ರವರೆಗೆ ಸರಬರಾಜುಗಳನ್ನು ನಿರ್ವಹಿಸಲಾಯಿತು, ಆದರೆ ಈಗ ಇದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಆರಂಭದಲ್ಲಿ, ಈ ಯೋಜನೆಯು ರಾಜ್ಯದ ವಿವಿಧ ಭಾಗಗಳಲ್ಲಿ ಮೊಬೈಲ್ ವ್ಯಾನ್ಗಳು ಮತ್ತು ಆಯ್ದ ಮಾಲ್ಗಳ ಮೂಲಕ ಆಹಾರ ಪದಾರ್ಥಗಳನ್ನು ವಿತರಿಸುತ್ತಿತ್ತು. ಗ್ರಾಹಕರು ಹತ್ತು ಕೆಜಿಗಳಷ್ಟು ಅಕ್ಕಿ ಅಥವಾ ಗೋಧಿ ಹಿಟ್ಟನ್ನು ಖರೀದಿಸಬಹುದು, ಕೆಲವು ಜಿಲ್ಲೆಗಳಲ್ಲಿ ಬೇಳೆಕಾಳುಗಳು ಮಾರಾಟ ಮಾಡಲಾಗಿತ್ತು. ಆದರೆ ಮೋದಿ ಸರ್ಕಾರ ಹೇಳಿಕೊಳ್ಳುವಂತೆ ಈ ಯೋಜನೆ ಎಲ್ಲರಿಗೂ ತಲುಪಲಿಲ್ಲ ಮತ್ತು ಕೆಲವು ಕಡೆ ಮಾತ್ರ ಬೇಳೆ ಮತ್ತು ಗೋಧಿಯನ್ನು ವಿತರಿಸಲಾಗಿದೆ.
ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಕಾರ್ಡುದಾರರಿಗೆ, ರಾಜ್ಯವು ಪ್ರತಿ ವ್ಯಕ್ತಿಗೆ ಐದು ಕೆಜಿಗಳಷ್ಟು ಅಕ್ಕಿಯನ್ನು ಉಚಿತವಾಗಿ ವಿತರಿಸಿದರೆ ಜೊತೆಗೆ ಉಳಿದ ಐದು ಕೇಜಿ ಅಕ್ಕಿಯ ಬದಲಾಗಿ ಹಣವನ್ನು ಪಡಿತರ ಖಾತೆಗೆ ನೇರ ಜಮೆ ಮಾಡಲಾಗುತ್ತಿದೆ. ಬಡತನ ರೇಖೆಗಿಂತ ಮೇಲಿನ (ಎಪಿಎಲ್) ಕಾರ್ಡುದಾರರು ಪ್ರತಿ ಕೆಜಿಗೆ ₹ 15 ರಂತೆ ಹತ್ತು ಕೆಜಿಗಳಷ್ಟು ಅಕ್ಕಿಯನ್ನು ಪಡೆಯುತ್ತಿದ್ದಾರೆ.
ವಲಸಿಗರು ಮತ್ತು ದಿನಗೂಲಿ ಕಾರ್ಮಿಕರು ಸೇರಿದಂತೆ ಪಡಿತರ ಚೀಟಿ ಇಲ್ಲದ ಅನೇಕ ಕುಟುಂಬಗಳು ಕೈಗೆಟುಕುವ ಆಹಾರಕ್ಕಾಗಿ ತೊಂದರೆಗಳನ್ನು ಎದುರಿಸುತ್ತಿರುವ ಇಂತಹ ಸಂದರ್ಭಗಳಲ್ಲಿ ಭಾರತ್ ಅಕ್ಕಿ ಯೋಜನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವುದು ಜನರ ಸಂಕಷ್ಟವನ್ನು ಹೆಚ್ಚಿಸಿದೆ.
NAFED ಕರ್ನಾಟಕ ವಿಭಾಗದ ಮುಖ್ಯಸ್ಥ ವಿನಯ್ಕುಮಾರ್ ಮಾತನಾಡಿ, ಸುಮಾರು 5,000 ಟನ್ ಭಾರತ್ ಅಕ್ಕಿ, ಗೋಧಿ ಹಿಟ್ಟು ಮತ್ತು ಬೇಳೆಕಾಳುಗಳನ್ನು ಮೊಬೈಲ್ ವ್ಯಾನ್ಗಳು ಮತ್ತು ರಿಲಯನ್ಸ್ ಮಾರ್ಟ್ ಮತ್ತು ಜಿಯೋ ಮಾರ್ಟ್ನಂತಹ ಆಯ್ದ ಮಳಿಗೆಗಳ ಮೂಲಕ ಮಾರಾಟ ಮಾಡಲಾಗಿದೆ. ಹೆಚ್ಚಿನ ಬೇಡಿಕೆ ಇದ್ದು ಸಂಪೂರ್ಣ ಸರಬರಾಜು ಮುಗಿದಿದೆ. ಜುಲೈ 1 ರಿಂದ ಯಾವುದೇ ದಿನಸಿಗಳನ್ನು ವಿತರಿಸಲಾಗಿಲ್ಲ ಎಂದು ಹೇಳಿದ್ದಾರೆ.