ವಿಶ್ವಕಪ್ ಫೈನಲ್: ಈ ಮೂರು ಆಟಗಾರರೇ ಭಾರತದ ಪಾಲಿಗೆ ಡೇಂಜರಸ್

Most read

ಬ್ರಿಡ್ಜ್ ಟೌನ್ (ಬಾರ್ಬಡಸ್): ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ವಿಶ್ವಕಪ್ ಫೈನಲ್ ಹಣಾಹಣಿಯಲ್ಲಿ ಭಾರತ ತಂಡಕ್ಕೆ ಸವಾಲೊಡ್ಡಬಲ್ಲ ಹಲವು ಆಟಗಾರರು ಹರಿಣಗಳ ಪಡೆಯಲ್ಲಿದ್ದಾರೆ. ಇವರನ್ನು ಬೇಗನೇ ನಿವಾರಿಸಿಕೊಂಡಲ್ಲಿ ಭಾರತದ ಗೆಲುವಿನ ಸಾಧ್ಯತೆಗಳು ಹೆಚ್ಚುತ್ತವೆ.

ಕ್ವಿಂಟನ್ ಡಿ ಕಾಕ್:

ಬಿರುಸಿನ ಆಟಕ್ಕೆ ಹೆಸರಾದ ಕ್ವಿಂಟನ್ ಡಿ ಕಾಕ್ ದಕ್ಷಿಣ ಆಫ್ರಿಕಾ ತಂಡದ ಪರವಾಗಿ ಈ ಟೂರ್ನಿಯಲ್ಲಿ ಅತಿಹೆಚ್ಚು ರನ್ ಗಳಿಸಿ ಮಿಂಚುತ್ತಿದ್ದಾರೆ. ಅವರ ಬ್ಯಾಟ್ ನಿಂದ ಎರಡುಅರ್ಧ ಶತಕಗಳು ಸೇರಿದಂತೆ 204 ರನ್ ಗಳು ಸಿಡಿದಿವೆ. ಕ್ವಿಂಟನ್ ಡಿ ಕಾಕ್ ಸ್ಕೋರಿಂಗ್ ರೇಟ್ 143.66. ಕ್ವಿಂಟನ್ ಡಿ ಕಾಕ್ ಭಾರತದ ವಿರುದ್ಧದ ಪಂದ್ಯಗಳಲ್ಲಿ ಚೆನ್ನಾಗಿ ಆಡಿದ ಇತಿಹಾಸ ಹೊಂದಿದ್ದಾರೆ. ಐಪಿಎಲ್ ನಲ್ಲೂ ಆಡಿರುವುದರಿಂದ ಅವರಿಗೆ ಭಾರತೀಯ ಬೌಲರ್ ಗಳನ್ನು ಎದುರಿಸಿ ಅಭ್ಯಾಸವಿದೆ.

ಮೊದಲ ಓವರ್ ನಿಂದಲೇ ಬಿರುಸಿನ ಆಟಕ್ಕೆ ಇಳಿಯುವ ಕ್ವಿಂಟನ್ ಡಿ ಕಾಕ್ ಗೆ ಕಡಿವಾಣ ಹಾಕುವುದು ಕಷ್ಟದ ಕೆಲಸ. ಅರ್ಶದೀಪ್, ಬುಮ್ರಾ, ಅಕ್ಷರ್ ಪಟೇಲ್ ಈ ಮೂವರಲ್ಲಿ ಒಬ್ಬರು ಆರಂಭದಲ್ಲೇ ಇವರನ್ನು ಔಟ್ ಮಾಡುವುದು ಮುಖ್ಯಗುರಿಯಾಗಲಿದೆ.

ಡೇವಿಡ್ ಮಿಲ್ಲರ್:

ದಕ್ಷಿಣ ಆಫ್ರಿಕಾದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಡೇವಿಡ್ ಮಿಲ್ಲರ್ ಭಾರತಕ್ಕೆ ಅಪಾಯಕಾರಿಯಾಗಲ್ಲ ದಾಂಡಿಗ. ಡೇವಿಡ್ ಮಿಲ್ಲರ್ ಭಾರತೀಯರಿಗೆ ಚಿರಪರಿಚಿತ ಆಟಗಾರ. ಅವರು 20-30 ಎಸೆತ ಎದುರಿಸಿದರೆ ಪಂದ್ಯದ ಗತಿಯನ್ನೇ ಬದಲಾಯಿಸಬಲ್ಲರು. ಟಿ ಟ್ವೆಂಟಿ ಕ್ರಿಕೆಟ್ ನಲ್ಲಿ ಅತ್ಯುತ್ತಮ ಫಿನಿಷರ್ ಗಳಲ್ಲಿ ಒಬ್ಬರು ಡೇವಿಡ್ ಮಿಲ್ಲರ್. ಅವರು ಈ ಟೂರ್ನಿಯಲ್ಲಿ ಎಂಟು ಪಂದ್ಯಗಳಲ್ಲಿ 148 ರನ್ ಗಳಿಸಿದ್ದಾರೆ. ಆದರೆ ದೊಡ್ಡ ಪಂದ್ಯಗಳಲ್ಲಿ ದೊಡ್ಡ ಆಟಗಾರರು ಆಡುವುದು ಸಾಮಾನ್ಯ. ಹೀಗಾಗಿ ಡೇವಿಡ್ ಮಿಲ್ಲರ್ ವಿಕೆಟ್ ಭಾರತಕ್ಕೆ ತುಂಬ ಮುಖ್ಯವಾಗುತ್ತದೆ.

ಆನ್ರಿಚ್ ನಾರ್ಟ್ಜೆ:

ಭಾರತಕ್ಕೆ ಜಸ್ಪೀತ್ ಬುಮ್ರಾ ಇದ್ದಂತೆ ಹರಿಣಗಳ ಪಡೆಯಲ್ಲಿ ಆನ್ರಿಚ್ ನಾರ್ಟ್ಜೆ ಇದ್ದಾರೆ. ಈ ಬಲಗೈ ವೇಗಿ ಈ ಟೂರ್ನಿಯಲ್ಲಿ 13 ವಿಕೆಟ್ ಕಿತ್ತು ಗಮನ ಸೆಳೆದಿದ್ದಾರೆ. ಇವರ ಬತ್ತಳಿಕೆಯಲ್ಲಿ ಯಾರ್ಕರ್, ಬೌನ್ಸರ್, ವೇಗ ಎಲ್ಲವೂ ಇವೆ. ತನ್ನ ಸೀಮ್ ಪೊಸಿಷನ್ ನಿಂದ ಬ್ಯಾಟ್ಸ್ ಮನ್ ಗಳನ್ನು ಕಕ್ಕಾಬಿಕ್ಕಿಯಾಗಿಸುವ ಶಕ್ತಿ ಇವರಿಗಿದೆ.

ದಕ್ಷಿಣ ಆಫ್ರಿಕಾದ ವೇಗದ ಬೌಲಿಂಗ್ ಸಶಕ್ತವಾಗಿದೆ. ಮಾರ್ಕೊ ಜಾನ್ಸನ್ ಅತ್ಯುತ್ತಮ ಫಾರಂ ನಲ್ಲಿದ್ದಾರೆ. ಕಗಿಸೋ ರಬಾಡ ಸಾಮರ್ಥ್ಯವನ್ನು ಭಾರತ ತಂಡ ಮರೆಯುವಂತಿಲ್ಲ. ಇವರಿಬ್ಬರ ಜೊತೆಯಲ್ಲಿ ಆನ್ರಿಚ್ ನಾರ್ಟ್ಜೆ ಭಾರತಕ್ಕೆ ದೊಡ್ಡ ಸವಾಲಾಗಬಲ್ಲರು.

More articles

Latest article