ಬಿಎಸ್‌ವೈ ವಿರುದ್ಧ ಪೋಕ್ಸೊ ಪ್ರಕರಣ ದಾಖಲಿಸಿದ್ದ ಸಂತ್ರಸ್ತೆಯ ಸಾವು ಮತ್ತು ಅದರಾಚೆಗಿನ ಪ್ರಶ್ನೆಗಳು

Most read

ಬೆಂಗಳೂರು: ಬಿಎಸ್‌ ಯಡಿಯೂರಪ್ಪ ವಿರುದ್ಧ ಪೋಕ್ಸೊ ಪ್ರಕರಣ ದಾಖಲಿಸಿದ್ದ ಅಪ್ರಾಪ್ತ ಸಂತ್ರಸ್ತೆಯ ತಾಯಿ ನಗರದ ಹುಳಿಮಾವಿನ ಖಾಸಗಿ ಆಸ್ಪತ್ರೆಯಲ್ಲಿ ಭಾನುವಾರ ಸಂಜೆ ಮೃತಪಟ್ಟಿದ್ದಾರೆ. ಉಸಿರಾಟದ ಸಮಸ್ಯೆಯಿಂದ ನಿನ್ನೆ ಸಂಜೆ ಮಹಿಳೆ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ತೆರಳಿದ್ದರು. ಆಸ್ಪತ್ರೆ ತಲುಪಿ 45 ನಿಮಷಗಳೊಳಗೆ ಅವರು ಮೃತಪಟ್ಟಿದ್ದಾರೆ ಎಂದು ಮೂಲಗಳು ದೃಡೀಕರಿಸಿವೆ. ಜತೆಗೆ ಮಾಜಿ ಮುಖ್ಯಮಂತ್ರಿ ಮತ್ತು ಪ್ರಭಾವಿ ರಾಜಕಾರಣಿ ಬಿಎಸ್ ಯಡಿಯೂರಪ್ಪ ಅವರ ವಿರುದ್ಧ ಗಂಭೀರ ಪ್ರಕರಣ ದಾಖಲಾದ 40 ದಿನದೊಳಗೆ ಮೃತಪಟ್ಟಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಮೃತ ಮಹಿಳೆ ಹೊಸೂರು ರಸ್ತೆಯ ಬೊಮ್ಮನಹಳ್ಳಿಯ ಅಪಾರ್ಟ್‌ಮೆಂಟ್‌ ಒಂದರಲ್ಲಿ ವಾಸವಿದ್ದರು. ಅಪ್ರಾಪ್ತ ಸಂತ್ರಸ್ತೆ ಯಡಿಯೂರಪ್ಪ ಅವರ ಸಹಾಯ ಕೋರಿ ಡಾಲರ್ಸ್ ಕಾಲೋನಿಯ ಮನೆಗೆ ಹೋದಾಗ, ಯಡಿಯೂರಪ್ಪ ಲೈಂಗಿಕವಾಗಿ ಕಿರುಕುಳ ನೀಡಿದರು ಎಂದು ಗಂಭೀರ ಆರೋಪ ಮಾಡಲಾಗಿತ್ತು. ಸದಾಶಿವ ನಗರದಲ್ಲಿ ಮಾಜಿ ಮುಖ್ಯಮಂತ್ರಿ ವಿರುದ್ಧ ಕಳೆದ ಮಾರ್ಚ್‌ 15ರಂದು ಪೋಕ್ಸೋ ಪ್ರಕರಣ ದಾಖಲಾಗಿತ್ತು. 17 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಾಜಿ ಸಿಎಂ ವಿರುದ್ಧ ಪೋಕ್ಸೋ ಹಾಗೂ ಐಪಿಸಿ ಸೆಕ್ಷನ್‌ 354 (ಎ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಜತೆಗೆ ಉನ್ನತ ಮೂಲಗಳ ಮಾಹಿತಿ ಪ್ರಕಾರ ಮೃತ ಮಹಿಳೆ ಶರೀರವನ್ನು ಈಗಾಗಲೇ ಸಂಬಂದಿಗಳಿಗೆ ನೀಡಲಾಗಿದೆ. ಆದರೆ ಮರಣೋತ್ತರ ಪರೀಕ್ಷೆ ನಡೆಸದೇ ಶರೀರ ಹಸ್ತಾಂತರಿಸಲಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

ಯಡಿಯೂರಪ್ಪ, ಹಿರಿಯ ಪೊಲೀಸ್‌ ಅಧಿಕಾರಿ ಅಲೋಕ್‌ ಕುಮಾರ್ ರೀತಿಯ ಪ್ರಭಾವಿಗಳ ವಿರುದ್ಧ ಈ ಹಿಂದೆ ದೂರು ನೀಡಿದ್ದ ವ್ಯಕ್ತಿಯ ಮರಣೋತ್ತರ ಪರೀಕ್ಷೆ ನಡೆಸದೇ ಶರೀರ ಹಸ್ತಾಂತರಿಸಿರುವುದು ಸಹಜವಾಗಿ ಸಂಶಯಗಳಿಗೆ ದಾರಿ ಮಾಡಿ ಕೊಟ್ಟಿವೆ.‌ ಮೃತ ಮಹಿಳೆಯ ತಮ್ಮ ಮತ್ತು ಇತರೆ ಸಂಬಂಧಿಗಳು ಬಂದು ಶರೀರ ಪಡೆದು ಹೋಗಿದ್ಧಾರೆ ಎಂಬ ಮಾಹಿತಿಯಿದೆ. ಆದರೆ ಹಲವು ವರ್ಷಗಳಿಂದ ಆಕೆಯು ತನ್ನ ತವರು ಸಂಬಂಧಿಗಳು ಅವರನ್ನು ದೂರವೇ ಇರಿಸಿದ್ದರು ಎನ್ನಲಾಗಿದೆ. ಜತೆಗೆ ಅವರ ಮಗಳು ಈಗ ಎಲ್ಲಿದ್ದಾರೆ? ಮತ್ತು ಅವರು ಮೃತದೇಹ ಸ್ವೀಕರಿಸಲು ಯಾಕೆ ಬಂದಿರಲಿಲ್ಲ ಎಂಬ ಪ್ರಶ್ನೆಗೆ ಉತ್ತರಗಳು ಸಿಗುತ್ತಿಲ್ಲ. ಕನ್ನಡ ಪ್ಲಾನೆಟ್‌ ಮೃತ ಮಹಿಳೆಯ ಮಗಳನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ, ಮೊಬೈಲ್‌ ಸ್ವಿಚ್‌ ಆಫ್‌ ಆಗಿರುವುದು ತಿಳಿದು ಬಂದಿದೆ.

ಪೋಕ್ಸೋ ಸಂತ್ರಸ್ತೆಯ ತಾಯಿಯ ದಿಢೀರ್ ಸಾವು ಮತ್ತು ಅದರ ನಂತರ ನಡೆಯುತ್ತಿರುವ ಕ್ಷಿಪ್ರ ಬೆಳವಣಿಗೆಗಳು ಹಲವು ಪ್ರಶ್ನೆಗಳನ್ನು ಮುಂದೆ ಇಡುತ್ತಿವೆ.‌ ಹೆಸರು ಹೇಳಲು ಇಚ್ಚಿಸದ ಮೃತಳ ಆಪ್ತರೊಬ್ಬರು ಕನ್ನಡ ಪ್ಲಾನೆಟ್‌ಗೆ ಮಾತನಾಡಿದ್ದು, “ಮಮತಾ ಸಿಂಗ್‌ ಮದುವೆಯಾಗಿದ್ದು ಬಿಹಾರದ ಸಿಂಗ್‌ ಒಬ್ಬರನ್ನು. ಆದರೆ ಅವರು ಲಿಂಗಾಯತರಾಗಿದ್ದರು. ಮರಣೋತ್ತರ ಪರೀಕ್ಷೆ ಮಾಡದಿರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿವೆ. ಜತೆಗೆ ಏನಾದರೂ ದೇಹವನ್ನು ಸಂಪ್ರದಾಯದಂತೆ ಹೂಳದೇ, ಸುಟ್ಟರೆ ಅನುಮಾನಗಳು ಇನ್ನಷ್ಟು ಸ್ಪಷ್ಟವಾಗುತ್ತವೆ,” ಎಂದಿದ್ದಾರೆ.ಈ ಬಗ್ಗೆ ಮಾತನಾಡಿದ ಆಗ್ನೇಯ ವಿಭಾಗದ ಡಿಸಿಪಿ ಸಿಕೆ ಬಾಬಾ ಹೆಚ್ಚಿನ ಮಾಹಿತಿ ನೀಡಿದರು. “ಮೃತ ಮಹಿಳೆ ಆಸ್ಪತ್ರೆಗೆ ಬರುವ ಮುನ್ನವೇ ಸಾವನ್ನಪ್ಪಿದ್ದರು. ಮರಣೋತ್ತರ ಪರೀಕ್ಷೆ ಮಾಡಲೇ ಬೇಕಾಗಿತ್ತು. ಆದರೆ ಅವರು ಆಸ್ಪತ್ರೆಗೆ ಬಂದ ಕೆಲ ಸಮಯದ ನಂತರ ಸಾವನ್ನಪ್ಪಿದ್ದಾರೆ. ಅವರ ಮಗ ಮತ್ತು ಮಗಳು ಮರಣೋತ್ತರ ಪರೀಕ್ಷೆ ಮಾಡಲು ಒಪ್ಪಿಗೆ ನೀಡಲಿಲ್ಲ ಅಥವಾ ಮನವಿಯನ್ನು ಮಾಡಲಿಲ್ಲ. ಮೃತ ಮಹಿಳೆ ಶ್ವಾಸಕೋಶದ ಕ್ಯಾನ್ಸರ್‍‌ನಿಂದ ಬಳಲುತ್ತಿದ್ದರು. ವೈದ್ಯಾಧಿಕಾರಿಗಳು ಇದು ಸಹಜ ಸಾವು ಎಂಬ ವರದಿ ನೀಡಿದ್ದಾರೆ. ಯಾರಾದರೂ ದೂರು ನೀಡಿದಲ್ಲಿ ಮರಣೋತ್ತರ ಪರೀಕ್ಷೆ ಮಾಡಲಾಗುತ್ತಿತ್ತು. ಆದರೆ ಯಾರೂ ದೂರು ನೀಡಿಲ್ಲ ಮತ್ತು ಕುಟುಂಬದವರಿಗೂ ಅದರ ಇಷ್ಟವಿರಲಿಲ್ಲ. ನಾವು ಯಾರನ್ನೂ ಒತ್ತಾಯ ಮಾಡಲು ಸಾಧ್ಯವಿಲ್ಲ,” ಎಂದು ಡಿಸಿಪಿ ಬಾಬಾ ಮಾಹಿತಿ ನೀಡಿದರು. ದೂರು ಅಥವಾ ಅನುಮಾನ ಇಲ್ಲದೇ ಮರಣೋತ್ತರ ಪರೀಕ್ಷೆ ಮಾಡದೇ ಇರುವುದು ಮತ್ತಷ್ಟು ಅನನುಮಾನಕ್ಕೆ ದಾರಿ ಮಾಡಿದರೂ, ಸಿಕೆ ಬಾಬಾ ನೀಡುತ್ತಿರುವ ಸಮಜಾಯಿಶಿ ಕಾನೂನಿನ ಚೌಕಟ್ಟಿನ ಅಡಿಯಲ್ಲೇ ಇದೆ. ಆದರೆ ಮೃತರ ಆಪ್ತರು ಹೇಳುವಂತೆ ದೇಹವನ್ನು ಲಿಂಗಾಯತ ಸಂಪ್ರದಾಯದಂತೆ ಹೂಳದೇ, ಸುಟ್ಟರೆ ಆಗ ಇನ್ನಷ್ಟು ಅನುಮಾನಕ್ಕೆ ದಾರಿಯಾಗುವ ಸಾಧ್ಯತೆಯಿದೆ.

More articles

Latest article