ಚನ್ನಗಿರಿ  ಲಾಕಪ್‌ ಡೆತ್: ಪೊಲೀಸ್‌ ಅಧಿಕಾರಿಗಳ ಅಮಾನತು

Most read

ಮೈಸೂರು/ಚನ್ನಗಿರಿ: ಚನ್ನಗಿರಿಯಲ್ಲಿ ನಡೆದಿರುವ ಲಾಕಪ್‌ ಡೆತ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪ ಎಸಗಿದ ಅಧಿಕಾರಿಗಳ ಅಮಾನತಿಗೆ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ.

ಮೃತಪಟ್ಟ ಯುವಕನಿಗೆ ಮೂರ್ಛೆ ರೋಗ ಇತ್ತು. ಅದರಿಂದಾಗಿಯೇ ಆತ ಮೃತಪಟ್ಟಿದ್ದಾನೆ ಎಂಬ ಮಾಹಿತಿ ಇದೆ. ಆದರೆ ಎಫ್‌ ಐ ಆರ್‌ ಇಲ್ಲದೆ ಆರೋಪಿಯನ್ನು ಠಾಣೆಗೆ ಕರೆತಂದಿದ್ದು ತಪ್ಪು. ಇದಕ್ಕಾಗಿ ಅಮಾನತು ಮಾಡುವಂತೆ ಸೂಚಿಸಿರುವುದಾಗಿ ತಿಳಿಸಿದ್ದಾರೆ. ಆದರೆ ಈ ಪ್ರಕರಣ ಲಾಕಪ್‌ ಡೆತ್ ಅಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಈ ನಡುವೆ ಘಟನೆ ಕುರಿತು ಮೃತ ಆದಿಲ್‌ ಕುರಿತು ಅವರ ಚಿಕ್ಕಪ್ಪ ಮಹಬೂಬ್‌ ಅಲಿ ಹೇಳಿಕೆ ನೀಡಿದ್ದು, ಆದಿಲ್‌ ಪಾಲಿಷ್‌ ಕೆಲಸ ಮಾಡ್ತಿದ್ದ. ಮಟ್ಕಾ ದಂಧೆ ಮಾಡ್ತಿರೋದು ಗೊತ್ತಿರಲಿಲ್ಲ. ಅದೇ ಕಾರಣಕ್ಕೆ ಪೊಲೀಸರು ಕರೆತಂದಿದ್ದಾರೆ. ಆತನಿಗೆ ಹುಟ್ಟಿನಿಂದ ಯಾವ ರೋಗವೂ ಇರಲಿಲ್ಲ. ಆತನ ದೇಹದ ಮೇಲೆ ಕೆಂಪು ಪಟ್ಟಿ ಗುರುತುಗಳಿದ್ದವು. ನಾವು ಆಸ್ಪತ್ರೆಗೆ ಹೋದಾಗ ಆದಿಲ್‌ ಮೃತಪಟ್ಟಿದ್ದ. ಪ್ರಕರಣದ ಕುರಿತು ನಿಷ್ಪಕ್ಷಪಾತ ತನಿಖೆಯಾಗಲಿ ಎಂದು ಹೇಳಿದ್ದಾರೆ.

ಮೃತ ಆದಿಲ್‌ ತಂದೆ ಕಲೀಂವುಲ್ಲಾ ಸಹ ಈ ಬಗ್ಗೆ ಹೇಳಿಕೆ ನೀಡಿದ್ದು, ಪೊಲೀಸರ ಹಲ್ಲೆಯಿಂದ ಆದಿಲ್‌ ಮೃತಪಟ್ಟಿಲ್ಲ. ಲೋ ಬಿಪಿ ಆಗಿ ನನ್ನ ಮಗ ಮೃತಪಟ್ಟಿದ್ದಾನೆ. ನನ್ನ ಮಗ ಆದಿಲ್‌ ಗೆ ಮೂರ್ಛೆ ರೋಗ ಇರಲಿಲ್ಲ. ಆತನ ಸಾವಿನ ಬಗ್ಗೆ ಯಾವುದೇ ರೀತಿ ಅನುಮಾನ ಇಲ್ಲ. ನನ್ನ ಮಗ ಯಾವುದೇ ಮಟ್ಕಾ ಆಡ್ತಾ ಇರಲಿಲ್ಲ.  ಪೊಲೀಸ್‌ ಠಾಣೆಗೆ ಯಾರು ಬಂದು ಕಲ್ಲು ಹೊಡೆದಿದ್ದಾರೋ ನನಗೆ ಗೊತ್ತಿಲ್ಲ. ನನ್ನ ಮಗ ಬಡಗಿ ಕೆಲಸ ಮಾಡಿಕೊಂಡಿದ್ದ. ಈ ವಯಸ್ಸಿನಲ್ಲಿ ನಾನು ದುಡಿಯೋಕೆ ಆಗಲ್ಲ. ಸರ್ಕಾರ ಪರಿಹಾರ ನೀಡಬೇಕು ಎಂದು ಹೇಳಿದ್ಧಾರೆ.

ನಿನ್ನೆ ಪೊಲೀಸರ ವಶದಲ್ಲಿದ್ದ ಚನ್ನಗಿರಿಯ ಟಿಪ್ಪುನಗರದ ನಿವಾಸಿ ಆದಿಲ್‌ (30) ಮೃತಪಟ್ಟ ಹಿನ್ನೆಲೆಯಲ್ಲಿ ಆತನ ಬಂಧುಗಳು, ಸಾರ್ವಜನಿಕರು ಪೊಲೀಸ್‌ ಠಾಣೆಯ ಮೇಲೆ ಕಲ್ಲೆಸೆದು, ಠಾಣೆಗೆ ನುಗ್ಗಿ ದಾಂಧಲೆ ನಡೆಸಿದ್ದರು.

ಈ ಬಗ್ಗೆ ಪೊಲೀಸ್‌ ವರಿಷ್ಠಾಧಿಕಾರಿ ಉಮಾಪ್ರಶಾಂತ್ ಪ್ರತಿಕ್ರಿಯಿಸಿ, “ನಿನ್ನೆ ವಶಕ್ಕೆ ಪಡೆಯಲಾದ ಅದಿಲ್ ಅನಾರೋಗ್ಯದಿಂದ ಮೃತಪಟ್ಟಿದ್ದಾನೆ. ಠಾಣೆಯಲ್ಲಿ ಕೆಲವೇ ನಿಮಿಷಗಳಿದ್ದ. ಅವರ ಸಂಬಂಧಿಕರು ಲಾಕಪ್ ಡೆತ್ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಸಂಪೂರ್ಣ ತನಿಖೆ ನಡೆಸುತ್ತೇವೆ. ಮೃತನ ತಂದೆ ಖಲೀಮ್ ಉಲ್ಲಾ ಕೂಡಾ ದೂರು ಸಲ್ಲಿಸಿದ್ದಾರೆ. ನ್ಯಾಯಾಧೀಶರ ಸಮ್ಮುಖದಲ್ಲಿ ಶವಪರೀಕ್ಷೆ ನಡೆಯಲಿದೆ. 5 ಪೊಲೀಸ್ ವಾಹನಕ್ಕೆ ಹಾನಿಯಾಗಿದ್ದು, 11 ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಮೃತನ ತಂದೆಯ ದೂರು ಸೇರಿ ಒಟ್ಟು ನಾಲ್ಕು‌‌ ಪ್ರಕರಣಗಳು ದಾಖಲಾಗಿವೆ. ‌ಸದ್ಯ ಪರಿಸ್ಥಿತಿ‌ ನಿಯಂತ್ರಣದಲ್ಲಿದೆ” ಎಂದು ತಿಳಿಸಿದ್ದಾರೆ.

More articles

Latest article