ಮೇ 18 ಕ್ಕೆ ಪ್ರಜ್ವಲ್ ರೇವಣ್ಣ ವಿರುದ್ಧ ಹೋರಾಟಕ್ಕೆ ಹಾಸನದಲ್ಲಿ ರಾಜ್ಯ ಮಟ್ಟದ ಸಮಾಲೋಚನಾ ಸಭೆ

Most read

ಹಾಸನ: ಹಾಸನದ ಸಂಸದ, NDA ಅಭ್ಯರ್ಥಿ ಪ್ರಜ್ವಲ್ ರೇವಣ್ಣ ನಡೆಸಿರುವ ನೂರಾರು ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಲ್ಲಿ ಕೂಡಲೇ ಪ್ರಜ್ವಲ್ ರೇವಣ್ಣನ ಬಂಧಸಿ ಮತ್ತು ಪ್ರಕರಣದ ಸೂಕ್ತ ತನಿಖೆ ನಡೆಸಿ ಹಾಗೂ ಆತನಿಗೆ ಶೀಘ್ರ ಕಠಿಣ ಶಿಕ್ಷೆಗೆ ಒಳಪಡಿಸುಂತೆ ಒತ್ತಾಯಿಸಿ ಬೃಹತ್ ಹೋರಾಟ ರೂಪಿಸಲು ಕರ್ನಾಟಕದ ಎಲ್ಲಾ ಮಹಿಳಾ, ದಲಿತ, ರೈತ, ಕಾರ್ಮಿಕ ಮತ್ತು ಜನಪರ ಸಂಘಟನೆಗಳ ಪ್ರಮುಖರ ಮತ್ತು ಸಮಾನ ಮನಸ್ಕರನ್ನು ಒಳಗೊಂಡ ‘ರಾಜ್ಯ ಮಟ್ಟದ ಸಮಾಲೋಚನಾ ಸಭೆ’ ಮೇ 18 ರ ಶನಿವಾರ ಬೆಳಗ್ಗೆ 11 ಗಂಟೆಗೆ ಹಾಸನದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ನಡೆಯಲಿದೆ.

ಹಾಸನದ ಸಂಸದ ಪ್ರಜ್ವಲ್ ರೇವಣ್ಣ ನೂರಾರು ಮಹಿಳೆಯರ ಮೇಲೆ ನಡೆಸಿರುವ ಲೈಂಗಿಕ ದೌರ್ಜನ್ಯದ ವಿರುದ್ಧ ಈಗಾಗಲೇ ಅತ್ಯಂತ ವ್ಯಾಪಕವಾಗಿ ತೀವ್ರ ಆಕ್ರೋಶ ಮತ್ತು ಪ್ರತಿಭಟನೆ ವ್ಯಕ್ತವಾಗಿದೆ. ಸಾರ್ವಜನಿಕವಾಗಿ ವ್ಯಕ್ತವಾದ ತೀವ್ರ ಒತ್ತಡದಿಂದಾಗಿ ರಾಜ್ಯ ಸರ್ಕಾರ ಈಗಾಗಲೇ ಎಸ್‌.ಐ.ಟಿ. ರಚಿಸಿ ಪ್ರಕರಣದ ತನಿಖೆ ನಡೆಯುತ್ತಿದೆ.

ಈ ನಡುವೆ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಪ್ರಕರಣದ ದಿಕ್ಕು ತಪ್ಪಿಸಲು ಹಾಗೂ ಪ್ರಕರಣದ ತನಿಖೆಯನ್ನು ಎಸ್.ಐ.ಟಿ. ಬದಲು ಸಿ.ಬಿ.ಐ.ಗೆ ವಹಿಸುವಂತೆ ಮತ್ತು ಲೈಂಗಿಕ ದೌರ್ಜನ್ಯಕ್ಕೊಳಗಾದ ಸಂತ್ರಸ್ತ ಮಹಿಳೆಯರ ವಿಶ್ವಾಸ ಕುಗ್ಗಿಸಿ ಅವರು ಎಸ್.ಐ.ಟಿ. ಮುಂದೆ ಹಾಜರಾಗದಂತ ಪರಿಸ್ಥಿತಿ ಸೃಷ್ಟಿಸುತ್ತಿವೆ. ಕಾಂಗ್ರೇಸ್ ಪಕ್ಷ ಮತ್ತು ರಾಜ್ಯದ ಕಾಂಗ್ರೇಸ್ ಸರ್ಕಾರ ಕೂಡ ಈ ರಾಜಕೀಯ ಲಾಭನಷ್ಟಗಳ ಲೆಕ್ಕಾಚಾರದ ಆಚೆಗೆ ಸಂತ್ರಸ್ತ ಮಹಿಳೆಯರ ರಕ್ಷಣೆ, ಪುನರ್ವಸತಿ ಹಾಗೂ ನೂರಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ವೀಡಿಯೋ ಚಿತ್ರೀಕರಣ ಮಾಡಿಕೊಂಡಿರುವ ಪ್ರಜ್ವಲ್ ರೇವಣ್ಣ ಮತ್ತು ಲೈಂಗಿಕ ವೀಡಿಯೋಗಳನ್ನು ಸಾರ್ವಜನಿಕವಾಗಿ ಬಿತ್ತರಿಸಿರುವವರನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಲು ಬೇಕಾದ ಸೂಕ್ಷ್ಮತೆ, ಪ್ರಬುದ್ಧತೆ ಮತ್ತು ದಿಟ್ಟತನವನ್ನು ತೋರಿಸಬೇಕಿದೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

ಪ್ರಜ್ವಲ್ ರೇವಣ್ಣ ಮತ್ತು ವೀಡಿಯೋಗಳನ್ನು ಹಂಚಿದವರನ್ನು ಕೂಡಲೇ ಬಂಧಿಸುವಂತೆ, ದೌರ್ಜನ್ಯಕ್ಕೊಳಗಾದ ಸಂತ್ರಸ್ಥ ಮಹಿಳೆಯರಿಗೆ ರಕ್ಷಣೆ ನೀಡಿ ಗೌಪ್ಯತೆ ಮತ್ತು ಘನತೆ ಕಾಪಾಡುವಂತೆ ಹಾಗೂ ಈ ಪ್ರಕರಣದ ತನಿಖೆ ನಡೆಸುತ್ತಿರುವ SIT ಯಾವುದೇ ರಾಜಕೀಯ ಮತ್ತು ಪ್ರಭಾವಿಗಳ ಒತ್ತಡಗಳಿಗೆ ಒಳಗಾಗದಂತೆ ಕಾರ್ಯನಿರ್ವಹಿಸಲು ಅವಕಾಶ ನೀಡುವಂತೆ ಮತ್ತು ನಿರ್ದಿಷ್ಟ ಕಾಲಮಿತಿಯೊಳಗೆ ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗುವಂತೆ ಒತ್ತಾಯಿಸಿ ರಾಜ್ಯಾದ್ಯಂತ ವ್ಯಾಪಕ ಚಳುವಳಿಯನ್ನು ರೂಪಿಸುವ ಅಗತ್ಯವಿದೆ.

ಈ ಚಳುವಳಿಗೆ ರಾಜ್ಯದ ಎಲ್ಲಾ ಮಹಿಳಾ, ದಲಿತ, ರೈತ, ಕಾರ್ಮಿಕ ಮತ್ತು ಜನಪರ ಸಂಘಟನೆಗಳು ಮತ್ತು ಸಮಾನ ಮನಸ್ಕರು ಒಟ್ಟಾಗಿ ಸೇರಿ ಐಕ್ಯ ವೇದಿಕೆಯ ಮುಖಾಂತರ ಕಾರ್ಯತಂತ್ರ ರೂಪಿಸಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ ದಿನಾಂಕ: 18 ಮೇ 2024 ರ ಶನಿವಾರ ಬೆಳಗ್ಗೆ 11 ಗಂಟೆಗೆ ಹಾಸನದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಕರ್ನಾಟಕ ರಾಜ್ಯದ ಮತ್ತು ಹಾಸನ ಜಿಲ್ಲೆಯ ಎಲ್ಲಾ ಮಹಿಳಾ, ದಲಿತ, ರೈತ, ಕಾರ್ಮಿಕ, ಅಲ್ಪಸಂಖ್ಯಾತ, ವಿದ್ಯಾರ್ಥಿ ಮತ್ತು ಯುವಜನ ಸಂಘಟನೆಗಳ ಪ್ರಮುಖರ ಹಾಗೂ ಸಮಾನ ಮನಸ್ಕರನ್ನು ಒಳಗೊಂಡ ರಾಜ್ಯ ಮಟ್ಟದ ಸಮಾಲೋಚನಾ ಸಭೆ ಕರೆಯಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಈ ಸಭೆಯಲ್ಲಿ ಮಹಿಳೆಯರ ಘನತೆಯನ್ನು ಉಳಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಒಂದು ಪ್ರಬಲ ಚಳುವಳಿ ರೂಪಿಸುವ ಹಾಗೂ ಹಾಸನ ನಗರದಲ್ಲಿ ಮೇ ತಿಂಗಳ ಅಂತ್ಯದಲ್ಲಿ ಒಂದು ದೊಡ್ಡ ಸ್ವರೂಪದ ಹೋರಾಟ ಹಾಗೂ ಬಹಿರಂಗ ಸಮಾವೇಶವನ್ನು ಆಯೋಜಿಸುವ ನಿಟ್ಟಿನಲ್ಲಿ ಚರ್ಚಿಸಿ ಎಲ್ಲರನ್ನೂ ಒಳಗೊಳ್ಳುವ ಒಂದು ವಿಶಾಲವಾದ ಐಕ್ಯ ವೇದಿಕೆ ರಚಿಸಲು ಸಭೆಯು ತೀರ್ಮಾನಿಸಲಿದೆ.

ಆದ್ದರಿಂದ ಮೇ 18 ರ ಶನಿವಾರ ಬೆಳಗ್ಗೆ 11 ಗಂಟೆಗೆ ಹಾಸನದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ನಡೆಯುವ ರಾಜ್ಯ ಮಟ್ಟದ ಸಮಾಲೋಚನಾ ಸಭೆಗೆ ಮಹಿಳೆಯರ ಘನತೆಯ ಪರವಾಗಿರು ಎಲ್ಲಾ ಸಂಘಟನೆಗಳ ಪ್ರಮುಖರು ಮತ್ತು ಸಮಾನ ಮನಸ್ಕರು ಆಗಮಿಸಬೇಕೆಂದು ಮನವಿ ಮಾಡಿಕೊಳ್ಳುತ್ತಿದ್ದೇವೆ ಎಂದು ಒಕ್ಕೂಟದ ಪರವಾಗಿ ಆರ್.ಪಿ. ವೆಂಕಟೇಶಮೂರ್ತಿ, ಎಚ್.ಕೆ. ಸಂದೇಶ್, ಧರ್ಮೇಶ್, ರೂಪ ಹಾಸನ, ಟಿ.ಆರ್. ವಿಜಯಕುಮಾರ್, ಅಂಬುಗ ಮಲ್ಲೇಶ್, ಎಸ್.ಎನ್. ಮಲ್ಲಪ್ಪ, ನಾಗರಾಜ್ ಹೆತ್ತೂರು, ಮರಿ ಜೋಸೆಫ಼್, ಇರ್ಷಾದ್ ಅಹಮದ್ ದೇಸಾಯಿ, ಮುಬಶಿರ್ ಅಹಮದ್, ಎಂ.ಬಿ. ಪುಷ್ಪ ಕೋರಿದ್ದಾರೆ.

More articles

Latest article