ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಮತ್ತಾವರ ಗ್ರಾಮದಲ್ಲಿ ಕಾಡಾನೆಯ ದಾಳಿಯಿಂದ ಕಾರ್ಮಿಕ ವಸಂತ್ (45) ಮೃತಪಟ್ಟಿದ್ದಾರೆ. ನಿರಂತರವಾಗಿ ಕಾಡಾನೆಗಳ ದಾಳಿಗೆ ಜನರು ಬಲಿಯಾಗುತ್ತಿದ್ದು, ಈ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುವವರೆಗೆ ಶವವನ್ನು ಸ್ಥಳದಿಂದ ಮೇಲೆತ್ತಲು ಬಿಡುವುದಿಲ್ಲ ಎಂದು ಅಲ್ಲಿನ ಸ್ಥಳಿಯ ಜನರು ಪ್ರತಿಭಟನೆ ನಡೆಸುತ್ತಿದ್ದಾರೆ.
ಸ್ಥಳಕ್ಕೆ ಹಾಸನ ಜಿಲ್ಲಾಧಿಕಾರಿ ಆಗಮಿಸಿ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ಯಾವುದೇ ಮನವೊಲಿಕೆ ಬಗ್ಗದ ಪ್ರತಿಭಟನಕಾರರು ಬೇಲೂರು ಸಕಲೇಶಪುರ ರಾಜ್ಯ ಹೆದ್ದಾರಿಯನ್ನು ತಡೆದು ಪ್ರತಿಭಟನೆಯ ಕಾವನ್ನು ಹೆಚ್ಚಿಸುತ್ತಿದ್ದಾರೆ. ಅರಣ್ಯ ಸಚಿವರು ಬಂದು ಈ ಸಾವಿಗೆ ಮತ್ತು ಕಾಡಾನೆಗಳ ದಾಳಿಗೆ ಶಾಶ್ವತ ಪರಿಹಾರ ಕೊಡುವವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಎಚ್ಚರಿಕೆಯನ್ನು ಕೊಡುತ್ತಿದ್ದಾರೆ ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಬೇಲೂರು ಶಾಸಕ ಎಚ್.ಕೆ ಸುರೇಶ ಹಾಗೂ ಎ.ಸ್ಪಿ ಮೊಹಮ್ಮದ್ ಸುಜಿತ ಇಂದು(ಶುಕ್ರವಾರ) ಬೆಳಗ್ಗೆ ಭೇಟಿ ನೀಡಿದ್ದಾರೆ. ಪ್ರತಿಭಟನಕಾರರ ಮನವೊಲಿಕೆ ಮಾಡಲು ಪೊಲೀಸರು ಹಾಗು ಅಧಿಕಾರಿಗಳು ಹರಸಾಹಸ ಪಟ್ಟಿದ್ದಾರೆ.