ಶಿರಸಿ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಭಾರತೀಯ ಜನತಾ ಪಕ್ಷದಿಂದ ಸ್ಪರ್ಧಿಸಿರುವ ಹವ್ಯಕ ಬ್ರಾಹ್ಮಣ ಸಮುದಾಯದ ಅಭ್ಯರ್ಥಿ ಪರವಾಗಿ ಫೇಸ್ ಬುಕ್, ವಾಟ್ಸಾಪ್ ಗಳಲ್ಲಿ ಶೇರ್ ಆಗುತ್ತಿರುವ ಪೋಸ್ಟ್ ಗಳನ್ನು ನೋಡಿ ಹಿಂದುಳಿದ ಸಮುದಾಯದ ಯುವಕರು ಕೆರಳಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ.
ವಾರದ ಕೆಳಗಷ್ಟೇ ‘ಬ್ರಾಹ್ಮಣರೆಲ್ಲ ಒಂದಾಗಿ, ಕಾಗೇರಿಯನ್ನು ಆರಿಸಿ ತರುತ್ತೇವೆ’ ಎಂಬ ಸಂದೇಶ ಸಾರುವ, ಹವ್ಯಕ ಮಹಿಳೆಯೊಬ್ಬರು ಹಾಡಿದ ಹಾಡು ವೈರಲ್ ಆಗಿ, ಸಂಸದ, ಬಿಜೆಪಿ ಟಿಕೆಟ್ ವಂಚಿತ ಅನಂತ್ ಕುಮಾರ್ ಹೆಗಡೆ ಬೆಂಬಲಿಗರನ್ನು ಕೆರಳಿಸಿತ್ತು. ಇದಾದ ನಂತರವೂ ಕಾಗೇರಿ ಬೆಂಬಲಿಗರು ಜಾತಿ ಹೆಸರಲ್ಲಿ ಪೋಸ್ಟ್ ಗಳನ್ನು ಹಾಕುವುದನ್ನು ಮುಂದುವರೆಸಿದ್ದಾರೆ.
ಬಲಿಷ್ಠ ಬ್ರಾಹ್ಮಣ ಸಮಾಜ ಶಿರಸಿ ಸಿದ್ದಾಪುರ ಎಂಬ ಫೇಸ್ ಬುಕ್ ಪೇಜ್ ನಲ್ಲಿ ‘ಹವ್ಯಕರ ನೆಲದಲ್ಲಿ ಹವ್ಯಕರೇ ಗೆಲ್ಲಬೇಕು’ ಎಂಬ ಸಂದೇಶ ಕಾಣಿಸಿಕೊಂಡಿದ್ದು, ಹಿಂದಿನಿಂದಲೂ ಬಿಜೆಪಿಯನ್ನು ಬೆಂಬಲಿಸಿಕೊಂಡುಬಂದ ಹಿಂದುಳಿದ ಸಮುದಾಯದ ಯುವಕರು ರೊಚ್ಚಿಗೆದ್ದಿದ್ದಾರೆ.
“ದೇಶ ಧರ್ಮ ಸಿದ್ಧಾಂತ ಈ ರೀತಿಯಾಗಿ ಹಿಂದುಳಿದ ವರ್ಗಗಳೆದುರು ಉದ್ದುದ್ದ ಭಾಷಣ ಬಿಗಿಯುವ ಇವರುಗಳ ಮುಖವಾಡ ಕಳಚಿದರೆ ಜಾತಿಯನ್ನು ಬಿಟ್ಟು ಇನ್ನೇನೂ ಇಲ್ಲ. ನಾವು ಇವರ ಭಾಷಣಕ್ಕೆ ಮರುಳಾಗಿ ಬಿಜೆಪಿಗೆ ಮತಹಾಕಿ ಗೆಲ್ಲಿಸುತ್ತೇವೆ. ಆದರೆ ಇವರಿಗೆ ಇರುವುದು ಕೇವಲ ಜಾತಿಪ್ರೇಮ. ನಾವು ಇನ್ನೂ ಎಚ್ಚರಗೊಳ್ಳದಿದ್ದರೆ ನಮ್ಮ ಮುಂದಿನ ಪೀಳಿಗೆ ಬ್ರಾಹ್ಮಣರ ಗುಲಾಮರಾಗಿ ಬದುಕಬೇಕಾಗುತ್ತದೆ. ಈ ಚುನಾವಣೆ ಬಿಜೆಪಿ ಕಾಂಗ್ರೆಸ್ ನಡುವೆ ನಡೆಯುತ್ತಿಲ್ಲ. ಬ್ರಾಹ್ಮಣ ಕಾಗೇರಿ ಮತ್ತು ಹಿಂದುಳಿದ ವರ್ಗದ ಅಂಜಲಿ ನಿಂಬಾಳ್ಕರ್ ಮಧ್ಯೆ ನಡೆಯುತ್ತಿರುವ ಯುದ್ಧವಿದು. ಬ್ರಾಹ್ಮಣ್ಯವನ್ನು ಸೋಲಿಸಿ ಹಿಂದುಳಿದ ವರ್ಗದ ವೀರಮಹಿಳೆಯನ್ನು ನಾವೆಲ್ಲರೂ ಸೇರಿ ಗೆಲ್ಲಿಸೋಣ ಬಂಧುಗಳೆ” ಎಂಬ ಸಂದೇಶ ಈಗ ವಾಟ್ಸಾಪ್ ಮತ್ತು ಫೇಸ್ ಬುಕ್ ಗಳಲ್ಲಿ ಹರಿದಾಡುತ್ತಿದೆ.
ಇನ್ನೊಂದೆಡೆ ವಿಪ್ರ ಬಾಂಧವರಲ್ಲಿ ಸವಿನಯ ವಿಜ್ಞಾಪನೆ ಎಂಬ ಸಂದೇಶವೂ ಓಡಾಡುತ್ತಿದ್ದು, ಅನಂತ ಕುಮಾರ್ ಹೆಗಡೆ ಟಿಕೆಟ್ ತಪ್ಪಿದ್ದು ಒಳ್ಳೆಯದಾಯಿತು. ಆತ ನಮ್ಮವರಿಗೆ (ಹವ್ಯಕರಿಗೆ) ಏನೂ ಮಾಡಿಲ್ಲ. ಹೀಗಾಗಿ ನಮ್ಮ ಜಾತಿಯವರನ್ನು ಹಚ್ಚಿಕೊಂಡಿರುವ ವಿಶ್ವೇಶ್ವರ ಹೆಗಡೆ ಕಾಗೇರಿಯನ್ನು ಗೆಲ್ಲಿಸಿ ಎಂದು ಬರೆಯಲಾಗಿದೆ.
“ಕಾಗೇರಿ ಹೆಗ್ಡೇರು ಸರಳ ಸಜ್ಜನ ಮನಷ. ನಮ್ಮ ಜಾತಿಯವರನ್ನು ಹಚ್ಕತ್ತ. ನಾನು ಹೇಳುದು ಸುಳ್ಳಲ್ಲ ನೋಡಿ ನಿಂಗೊ ಬೇಕಾದ್ರೆ. ಸಿರ್ಸಿ ಸಿದ್ದಾಪುರದಲ್ಲಿ ನಂಗಳ ಜಾತಿ ಮನೆ ಎಲ್ಲೆಲ್ಲಿದ್ದು ಎಲ್ಲ ಕಡೆಗೆ ರಸ್ತೆ ಮಾಡಿಕೊಟ್ಟಿದ್ದಾ. ಈಸಲ ಲೋಕಸಭೆ ಅಭ್ಯರ್ಥಿ ಆಯ್ದ. ಘಟ್ಟದ ಮೇಲಿನವು ಘಟ್ಟದ ಕೆಳಗಿನವು ಹೇಳಿ ಭೇದಭಾವ ಮಾಡದೆಯ ನಮ್ಮ ಸಮಾಜದವು ಎಲ್ಲರು ಒಗ್ಗಟ್ಟಾಗಿ ಗೆಲ್ಸಿದ್ರೆ ಇಡೀ ಜಿಲ್ಲೆಯ ಬ್ರಾಹ್ಮಣರ ಶಕ್ತಿಯನ್ನು ತೋರ್ಸುಲೆ ಇದೊಂದು ಸುವರ್ಣಾವಕಾಶ. ಕಾಗೇರಿ ಹೆಗ್ಡೆರು ಅನಂತಕುಮಾರನ ಹಾಂಗೆ ಇತರೆಜಾತಿಯವರ ಮನೇಲೆಲ್ಲಾ ಊಟ ಮಾಡ್ತ್ರಿಲ್ಲೆ. ಎಲ್ಲೇ ಹೋದ್ರು ನಮ್ಮವರ ಮನೇಲೆ ಊಟ ಮಾಡ್ತ್ರು. ಇಂತಾ ಹವ್ಯಕರತ್ನ ಗೆಲ್ಲವು. ಇಲ್ದಿದ್ರೆ ಇತರೆ ಜನರ ಹಾರಾಟ ಹೆಚ್ಚಾಗ್ತು. ವಿಚಾರ ಮಾಡಿ ಒಂದ್ಸಲ ನಿಂಗಳ ನೆಂಟ್ರಿಗೆಲ್ಲಾ ಹೇಳಿ. ಬೇರೆಯವರನ್ನೆಲ್ಲ ನಂಬಲಾಗ್ತಿಲ್ಲೆ. ನಮ್ಮ ಜಾತಿಯವು ಹೊರಗಡೆ ಇದ್ದವ್ರನ್ನೆಲ್ಲಾ ಕರೆಸಿ ಮತ ಹಾಕ್ಸವು.” ಎಂಬ ಸಂದೇಶ ವಾಟ್ಸಾಪ್ ಗ್ರೂಪ್ಗ ಗಳಲ್ಲಿ ಓಡಾಡುತ್ತಿದೆ.
“ದಯಮಾಡಿ ಈ ಮೆಸೇಜನ್ನ ಬೇರೆ ಗ್ರೂಪ್ ಗೆ ಹಾಕಡಿ. ಪರ್ಸನಲ್ಲಾಗಿ ನಮ್ಮ ಜಾತಿ ಜನಕ್ಕೆ ಕಳ್ಸಿ” ಎಂಬ ವಿನಂತಿಯನ್ನೂ ಮಾಡಿಕೊಳ್ಳಲಾಗಿದೆ. ಆದರೆ ಈಗ ಇದು ಎಲ್ಲ ಕಡೆ ಹರಡಿ ಮೊದಲೇ ಕಾಗೇರಿಯ ಜಾತಿಪ್ರೇಮದಿಂದ ರೋಸಿದ್ದ ಹಿಂದುಳಿದ ಸಮುದಾಯದ ಯುವಕರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ಶಿರಸಿಗೆ ಪ್ರಧಾನಿ ನರೇಂದ್ರ ಮೋದಿ ಪ್ರಚಾರಕ್ಕೆ ಬಂದಾಗ ನಾಮಧಾರಿಗಳೂ ಸೇರಿದಂತೆ ಹಿಂದುಳಿದ ಸಮುದಾಯಗಳ ನಾಯಕರಿಗೆ ಸರಿಯಾದ ಆದ್ಯತೆ ನೀಡಲಿಲ್ಲ ಎಂಬ ಕೋಪವೂ ಈ ವರ್ಗದ ಜನರಿಗಿದೆ. ಮೋದಿ ಕಾರ್ಯಕ್ರಮಕ್ಕೆ ಹೆಚ್ಚು ಸಂಖ್ಯೆಯಲ್ಲಿ ಹವ್ಯಕರನ್ನೇ ಸೇರಿಸಿದ್ದು ಎಲ್ಲರಿಗೂ ಎದ್ದು ಕಂಡಿದೆ. ಇದೆಲ್ಲದರ ನಡುವೆ ಕಾಗೇರಿ ಶಿಷ್ಯರು ಹವ್ಯಕರ ಹೆಸರಿನಲ್ಲಿ ಆಕ್ರಮಣಕಾರಿಯಾಗಿ ಪ್ರಚಾರ ನಡೆಸುತ್ತಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ಉತ್ತರ ಕನ್ನಡ ಕ್ಷೇತ್ರದಲ್ಲಿ ಅದರಲ್ಲೂ ವಿಶೇಷವಾಗಿ ಶಿರಸಿ, ಸಿದ್ಧಾಪುರ, ಅಂಕೋಲಾ, ಕುಮಟಾ ಭಾಗದಲ್ಲಿ ಈ ಬಾರಿ ಚುನಾವಣೆ ಕಾಗೇರಿ v/s ಡಾ.ಅಂಜಲಿ ಅಥವಾ ಬಿಜೆಪಿ v/s ಕಾಂಗ್ರೆಸ್ ಎಂಬುದಕ್ಕಿಂತ ಹೆಚ್ಚಾಗಿ ಬ್ರಾಹ್ಮಣ v/s ಹಿಂದುಳಿದ ಸಮುದಾಯ ಎಂಬಂತೆ ತಿರುವು ಪಡೆದುಕೊಂಡಿದೆ.