ಕಸ್ಟಡಿಯಲ್ಲಿ ಕಣ್ಣೀರಿಟ್ಟ ಮಾಜಿ ಪ್ರಧಾನಿ ಪುತ್ರ, ಹೊಳೆನರಸೀಪುರದಲ್ಲಿ ತಲ್ಲಣ, ಮಿಶ್ರ ಪ್ರತಿಕ್ರಿಯೆ

Most read

ಬೆಂಗಳೂರು/ಹೊಳೆನರಸೀಪುರ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಪುತ್ರ ಎಚ್.ಡಿ.ರೇವಣ್ಣ ಬಂಧನದ ಸುದ್ದಿ ಕೇಳುತ್ತಿದ್ದಂತೆ ಹೊಳೆನರಸೀಪುರಲ್ಲಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.

ರೇವಣ್ಣ ರಾಜಕೀಯ ವೈರಿಗಳು ಸಹಜವಾಗಿಯೇ ‘ಮಾಡಿದ್ದುಣ್ಣೋ ಮಹಾರಾಯ’ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇನ್ನೊಂದೆಡೆ ರೇವಣ್ಣ ಅಭಿಮಾನಿಗಳಲ್ಲಿ ಆತಂಕ ಮಡುಗಟ್ಟಿದ್ದು, ಜೆಡಿಎಸ್ ವಲಯದಲ್ಲಿ ಸೂತಕದ ಛಾಯೆ ಹರಡಿದೆ.

ಸತತ ಇಪ್ಪತ್ತು ವರ್ಷಗಳಿಂದ ಶಾಸಕರಾಗಿ ಗೆದ್ದುಬರುತ್ತಿರುವ ಎಚ್.ಡಿ.ರೇವಣ್ಣ ಅವರು ಕಟ್ಟಿಕೊಂಡಿದ್ದ ಸುಭದ್ರ ಕೋಟೆ ಕುಸಿಯುತ್ತಿದ್ದು, ಇನ್ನು ಮುಂದೆ ನಮ್ಮ ಪಾಡೇನು ಎಂದು ಅನುಯಾಯಿಗಳು ಆತಂಕಗೊಂಡಿದ್ದಾರೆ.

ಕಳೆದ 2023ರಲ್ಲಿ ನಡೆದ ಚುನಾವಣೆಯಲ್ಲಿ ದೇವೇಗೌಡರ ರಾಜಕೀಯ ವೈರಿ ಜಿ.ಪುಟ್ಟಸ್ವಾಮಿಗೌಡರ ಮೊಮ್ಮಗ ಶ್ರೇಯಸ್ ಪಟೇಲ್ ಯಾರೂ ಊಹಿಸದಂತೆ ಸ್ಪರ್ಧೆ ನೀಡಿದ್ದರು. ಕೆಲವೇ ಮತಗಳ ಅಂತರದಲ್ಲಿ ರೇವಣ್ಣ ಗೆದ್ದಿದ್ದರು. ಆಗಲೇ ರೇವಣ್ಣ ಕೋಟೆಯಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಈಗ ಅವರ ಪುತ್ರ ನಡೆಸಿದ ಕಾಮಕಾಂಡದಿಂದಾಗಿ ಜೆಡಿಎಸ್ ಪಾಳಯಕ್ಕೆ ಬಾಂಬ್ ಬಿದ್ದ ಅನುಭವವಾಗಿದೆ.

ನಿನ್ನೆ ಮಾಜಿ ಪ್ರಧಾನಿ ನಿವಾಸದಿಂದಲೇ ರೇವಣ್ಣ ಅವರನ್ನು ಬಂಧಿಸಿ ಬೋರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಿದ ನಂತರ ಸಿಐಡಿ ಕಚೇರಿಗೆ ಕರೆದೊಯ್ಯಲಾಗಿತ್ತು. ನಿನ್ನೆ ರಾತ್ರಿ ಇಡೀ ಸಿಐಡಿ ಕಚೇರಿಯಲ್ಲೇ ಅವರನ್ನು ಇರಿಸಲಾಗಿತ್ತು. ರೇವಣ್ಣ ಅವರಿಗೆ ಒಂದು ಬೆಡ್ ಮತ್ತು ಚೇರ್ ನೀಡಲಾಗಿತ್ತು.

ತನ್ನ ರಾಜಕೀಯ ಜೀವನದಲ್ಲಿ ಮೊದಲ ಬಾರಿ ಈ ರೀತಿಯ ಕ್ರಿಮಿನಲ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ರೇವಣ್ಣ ವಿಚಾರಣೆ ಸಂದರ್ಭದಲ್ಲಿ ಕಣ್ಣೀರಿಟ್ಟರು ಎಂದು ಮೂಲಗಳು ತಿಳಿಸಿವೆ.

ಇಂದು ಭಾನುವಾರದ ರಜೆ ಇರುವುದರಿಂದ ರೇವಣ್ಣ ಅವರನ್ನು ಕೋರಮಂಗಲದ ನ್ಯಾಯಾಧೀಶರ ನಿವಾಸಕ್ಕೆ ಕರೆದೊಯ್ದು ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗುವುದು.

More articles

Latest article