ಅಭಿವೃದ್ಧಿ ವಂಚಿತ ಉತ್ತರ ಕನ್ನಡ ಕ್ಷೇತ್ರದಲ್ಲಿ ಡಾ. ಅಂಜಲಿ ಗೆಲ್ಲಿಸಿ: ಎದ್ದೇಳು ಕರ್ನಾಟಕ ಅಭಿಯಾನ

Most read

ಕಾರವಾರ: `ಎದ್ದೇಳು ಕರ್ನಾಟಕ’ ಉತ್ತರ ಕನ್ನಡ ಜಿಲ್ಲಾ ಘಟಕದಿಂದ    ಯಲ್ಲಾಪುರ ಮತ್ತು ಕಾರವಾರ  ತಾಲ್ಲೂಕುಗಳಲ್ಲಿ ಚುನಾವಣಾಪೂರ್ವ ಜನಜಾಗೃತಿ ಕಾರ್ಯಕ್ರಮ ಮತ್ತು ಜನರೊಂದಿಗೆ ಸಂವಾದ ಹಾಗೂ ವಿವಿಧ ಸಮುದಾಯದ ಮುಖಂಡರೊಂದಿಗೆ ಸಭೆ ನಡೆಸಲಾಯಿತು.

ಉತ್ತರ ಕನ್ನಡ (ಕೆನರಾ) ಲೋಕಸಭಾ  ಕ್ಷೇತ್ರವು ಹಲವು ದಶಕಗಳಿಂದ ಅಭಿವೃದ್ದಿ ವಂಚಿತವಾಗಿದೆ. ಹೀಗಾಗಿ  ಈ ಬಾರಿ ಪ್ರಜ್ಞಾವಂತ, ವಿದ್ಯಾವಂತ ಮತ್ತು ಜನಪರ ಕಾಳಜಿಯ ಅಭ್ಯರ್ಥಿ, ಕಾಂಗ್ರೆಸ್ ಪಕ್ಷದ ಡಾ. ಅಂಜಲಿ ಹೇಮಂತ್ ನಿಂಬಾಳ್ಕರ್ ಅವರನ್ನು ಬೆಂಬಲಿಸಿ ಗೆಲ್ಲಿಸುವಂತೆ ಮನವಿ ಮಾಡಲಾಯಿತು.

ಮೊದಲನೇ ತಂಡವು ಯಲ್ಲಾಪುರ ತಾಲೂಕಿನ ಕೊಳಿಕೇರಿ, ಜೋಗಿಕೊಪ್ಪ, ದೇಶಪಾಂಡೆ ನಗರ, ಕೋಳಿವಾಡ, ಅಲ್ಕೆರಿ ಗೌಳಿವಾಡ, ಹೊಸಳ್ಳಿ, ಖಾರೆವಾಡ, ಕಿರವತ್ತಿ, ತೆಂಗಿನಗೆರಿ,ಮಾವಳ್ಳಿ, ಗುಳ್ಳಪೂರ, ಅರಬೈಲ, ಇಡಗುಂದೀ, ಮಾಗೊಡ , ಅರಳಿಕೊಪ್ಪಗಳಲ್ಲಿ ಪ್ರಚಾರಾಂದೋಲನ ಕೈಗೊಂಡಿತು.

ಎರಡನೇ ತಂಡವು ಕಾರವಾರ ತಾಲೂಕಿನ ಅವರ್ಸಾ, ಹಾರವಾಡ, ಮುದಗಾ, ಗಾಬಿತವಾಡ, ಅಮದಲ್ಲಿ, ತೋಡುರು, ಬೈತಕೊಲ, ದೇವಭಾಗ, ಚಿತ್ತಕೂಲಾ, ಸದಾಶಿವಘಡ, ಮಾಜಾಳಿ ಮುಂತಾದ ಕಡೆಗಳಲ್ಲಿ   ಗೌಳಿ, ಮರಾಠಾ, ಕುಣಬಿ, ಮೀನುಗಾರ , ಹಾಲಕ್ಕಿ, ಕ್ಷತ್ರಿಯ ಕೋಮಾರಪಂತ ಮತ್ತಿತರ ಸಮುದಾಯಗಳ ಪ್ರಮುಖರೊಂದಿಗೆ ಸಭೆ ನಡೆಸಿತು.

ಈ ಭಾಗದ ಬಹುಕಾಲದ ಬೇಡಿಕೆಯಾಗಿರುವ  ಜಿಲ್ಲೆಗೊಂದು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಆಗಬೇಕು, ಹಾಲಕ್ಕಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು, ಉದ್ಯೋಗಾವಕಾಶ ಒದಗಿಸಬೇಕು, ಮೀನುಗಾರರ ಸಂಕಷ್ಟಗಳು ಪರಿಹಾರವಾಗಬೇಕು ಎಂಬ ಬೇಡಿಕೆಗಳನ್ನು ಜನಸಮಾನ್ಯರು `ಎದ್ದೇಳು ಕರ್ನಾಟಕ’ ತಂಡದ ಮುಂದಿಟ್ಟರು.

ಮಹಿಳೆಯರು ಮೀನು ಮಾರಾಟ ಮಾಡಿ ಜೀವನ ಸಾಗಿಸುತ್ತಾರೆ, ಇತ್ತೀಚಿನ ವರ್ಷಗಳಲ್ಲಿ ಮತ್ಸ್ಯ ಕ್ಷಾಮದಿಂದ ಮೀನುಗಾರರ ಬದುಕಿನ ಮೇಲೆ ಬರೆ ಎಳೆದಂತಾಗಿದೆ. ಬಹುತೇಕ ಗ್ರಾಮಗಳಲ್ಲಿ ರಸ್ತೆ ಹಾಗೂ ಕುಡಿಯುವ ನೀರಿನ ಸಮಸ್ಯೆ ಇದೆ, ಸ್ವಸಹಾಯ ಸಂಘಗಳ ಮಹಿಳೆಯರಿಗೆ ಸಭೆ ನಡೆಸಲು ಸಭಾಭವನದ ಕೊರತೆ ಇದೆ, ಮಹಿಳೆಯರಿಗೆ ಉದ್ಯೋಗವಕಾಶ ನೀಡಲು ಉದ್ಯಮ ಸ್ಥಾಪನೆ ಆಗಬೇಕಿದೆ ಎಂದು ಗ್ರಾಮಸ್ಥರು ವಿವರಿಸಿದರು.

ಗೌಳಿ ಸಮುದಾಯದ ಮಕ್ಕಳು ಶಿಕ್ಷಣ ವನ್ನೂ ಪೂರ್ತಿಗೊಳಿಸದೆ ಅರ್ಧಕ್ಕೆ ಬಿಡುವುದು ನಡೆದಿದೆ ಮತ್ತು ಅಪ್ರಾಪ್ತ ಹೆಣ್ಣುಮಕ್ಕಳು ಜೀವನೋಪಾಯಕ್ಕಾಗಿ ಗೋವಾ ಮತ್ತು ಇತರೆ ಕಡೆಗಳಲ್ಲಿ ಮನೆಗೆಲಸ ಹಾಗೂ ಕೂಲಿ ಕೆಲಸಕ್ಕೆ ಹೋಗುತ್ತಾರೆ, ಸ್ಥಳೀಯ ನಿರುದ್ಯೋಗಿ ಯುವಕರು ಗಾರೆ ಕೆಲಸ  ಮಾಡಿ ಜೀವನ ನಿರ್ವಹಿಸುತ್ತಾರೆ. ಇವರ ನೆರವಿಗೆ ಸರ್ಕಾರಗಳು ಬರಬೇಕಿದೆ ಎಂದು ವಿನಂತಿಸಲಾಯಿತು.

ಇದೇ ಸಂದರ್ಭದಲ್ಲಿ ಎದ್ದೇಳು ಕರ್ನಾಟಕ ಪ್ರಕಟಿಸಿದ “ಅನುಭವಿಸಿದ್ದು ಸಾಕು” ಎಂಬ ಪುಸ್ತಕ ಮತ್ತು “ನಾಡ ಉಳಿಸುವ ಮಹಾಕಾಯಕದಲ್ಲಿ ಕೈ ಗೂಡಿಸ ಬನ್ನಿ”  ಎಂಬ ಕರಪತ್ರವನ್ನು   ಸಾರ್ವಜನಿಕರಿಗೆ ವಿತರಿಸಲಾಯಿತು. 

ಸಭೆ ಮತ್ತು ಸಂವಾದ ಕಾರ್ಯಕ್ರಮದ  ಸಂದರ್ಭದಲ್ಲಿ ಡಾ.ಅಂಜಲಿ ಹೇಮಂತ್ ನಿಂಬಾಳ್ಕರ್ ಅವರು ಬರೆದಿರುವ ` ಮನೆ ಮನೆಗೆ ಸಂವಿಧಾನ’ ಪುಸ್ತಕವನ್ನು ವಿತರಿಸಲಾಯಿತು. 

More articles

Latest article