ಹೆಣದ ಮೇಲಿನ ರಾಜಕಾರಣ ನಿಲ್ಲಿಸಿ: ಬಿಜೆಪಿಗೆ ಎದ್ದೇಳು ಕರ್ನಾಟಕ ತಾಕೀತು

Most read

ಬೆಂಗಳೂರು: ಬಿಜೆಪಿ ನಡೆಸುತ್ತಿರುವ ಸಾವಿನ ರಾಜಕಾರಣ ನಿಲ್ಲಿಸಬೇಕು, ಹೆಣ್ಣುಮಕ್ಕಳ ಸಾವಿನ ದುರಂತಕ್ಕೆ ಧರ್ಮದ ಬಣ್ಣಹಚ್ಚಿ ತಮ್ಮ ಸ್ವಾರ್ಥ ರಾಜಕಾರಣಕ್ಕೆ ಬಳಸುತ್ತಿರುವ ಬಿಜೆಪಿ, ಆರೆಸ್ಸೆಸ್ ಮತ್ತದರ ಪರಿವಾರದ ಕೊಳಕು ಕುತಂತ್ರವನ್ನು ನಾಡಿದ ಜನತೆ ಅರಿತು ಖಂಡಿಸಬೇಕು ಎಂದು ಆಗ್ರಹಿಸಿರುವ ʻಎದ್ದೇಳು ಕರ್ನಾಟಕʼ ಸಂಘಟನೆ, ಹೆಣ್ಣುಮಕ್ಕಳ ಮೇಲೆ ಭೀಕರ ದೌರ್ಜನ್ಯ ಎಸಗಿದ, ಕೊಲೆಗಳನ್ನು ಮಾಡಿದವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದೆ.

ಈ ಕುರಿತು ಸುದೀರ್ಘ ಪತ್ರಿಕಾ ಪ್ರಕಟಣೆ ನೀಡಿರುವ ಸಂಘಟನೆಯು. ಕರ್ನಾಟಕವು ಮಹಾನ್ ಮಾನವತಾವಾದಿಗಳಾದ ಸಂತ ಶರಣರಿಗೆ, ಕವಿ ಚಿಂತಕರಿಗೆ ಜನ್ಮ ನೀಡಿದ ನಾಡೆಂದು ಹೆಮ್ಮೆಪಡುವ, ಹತ್ತಾರು ಬಗೆಯ ಜನಾಂದೋಲನಗಳು ಹುಟ್ಟಿ ಮಾನವತೆಯನ್ನು ಹೆಮ್ಮರವಾಗಿ ಬೆಳೆಸುವಲ್ಲಿ ಕೊಡುಗೆ ನೀಡಿದವೆಂದು ಬೀಗುವ, ಈ ಎಲ್ಲ ಮನುಷ್ಯತ್ವದ ಸಿದ್ಧಾಂತಗಳು ನಮ್ಮ ನಾಡನ್ನು ಸಹನೆ, ಸಹಿಷ್ಣುತೆ, ಸಹಬಾಳ್ವೆಯ ಬೀಡನ್ನಾಗಿ ರೂಪಿಸಿವೆಯೆಂದು ಹೇಳಿಕೊಳ್ಳುವ ಹೊತ್ತಿನಲ್ಲೇ, ಇದೇ ಕರ್ನಾಟಕದ ಉದ್ದಗಲಕ್ಕೂ ಕಳೆದ ಕೆಲವು ದಿನಗಳಲ್ಲಿ ಹೆಣ್ಣುಮಕ್ಕಳ ಮೇಲೆ ನಡೆದಿರುವ ಭೀಕರವಾದ ದೌರ್ಜನ್ಯಗಳು ಮತ್ತು ಅಮಾನುಷವಾದ ಕೊಲೆಗಳು, ನಾಡಿನ ಮಹಿಳಾಪರರನ್ನು ಇನ್ನಿಲ್ಲದಂತೆ ಕಾಡಿವೆ. ನಮ್ಮ ಮನಸ್ಸುಗಳ ಮೇಲೆ ಆತಂಕದ ಕಾರ್ಮೋಡ ಕವಿದಿದೆ ಎಂದು ಆತಂಕ ವ್ಯಕ್ತಪಡಿಸಿದೆ.

ಕೇವಲ ದೌರ್ಜನ್ಯ ಪ್ರಕರಣಗಳಷ್ಟೇ ಅಲ್ಲದೆ, ಹುಬ್ಬಳ್ಳಿಯ ನೇಹಾ ಪ್ರಕರಣದಲ್ಲಿ ಆರೋಪಿಯ ಧರ್ಮವನ್ನು ಮುಂದಿಟ್ಟು ಬಿಜೆಪಿ ನಡೆಸುತ್ತಿರುವ ಸಾವಿನ ರಾಜಕಾರಣ ಅತ್ಯಂತ ಅನಾರೋಗ್ಯಕರ ಮತ್ತು ಅಸಹ್ಯಕರವಾದ ಬೆಳವಣಿಗೆಯಾಗಿದೆ. ಉತ್ತರ ಪ್ರದೇಶದ ಅಸಹಾಯಕ ಯುವತಿಯ ಮೇಲೆ ಅತ್ಯಾಚಾರ ಎಸಗಿದ ಬಿಜೆಪಿ ನಾಯಕ ಸೆಂಗರ್ ಪ್ರಕರಣದಲ್ಲಿ, ದೇಶದ ಹೆಮ್ಮೆಯ ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆಂಬ ತೀವ್ರವಾದ ಟೀಕೆಗೆ ಗುರಿಯಾದ ಬ್ರಿಜ್ ಭೂಷಣ್ ಪ್ರಕರಣದಲ್ಲಿ, ಮಣಿಪುರದ ಆದಿವಾಸಿ ಹೆಣ್ಣುಮಕ್ಕಳನ್ನು ಬೆತ್ತಲೆಗೊಳಿಸಿ ದೌರ್ಜನ್ಯ ನಡೆಸಿದ ಘೋರವಾದ ಘಟನೆಯಲ್ಲಿ, ಗುಜರಾತ್ನ ಬಿಲ್ಕೀಸ್ ಪ್ರಕರಣದ ಅಪರಾಧಿಗಳನ್ನು ಸನ್ನಡತೆಯ ಆಧಾರದಲ್ಲಿ ಬಿಜೆಪಿ ಸರ್ಕಾರ ಬಿಡುಗಡೆ ಮಾಡಿದ ಸಂದರ್ಭದಲ್ಲಿ, ಸ್ವತಃ ಅಪರಾಧಿಯ ಸ್ಥಾನದಲ್ಲಿ ನಿಂತಿರುವುದು ಬಿಜೆಪಿ ಪಕ್ಷವೇ ಆಗಿದೆ. ಮಹಿಳೆಯರ ಬದುಕು, ಸುರಕ್ಷತೆ ಮತ್ತು ಘನತೆಯ ಬಗ್ಗೆ ಎಂದೂ ಕಾಳಜಿಯಿಲ್ಲದೆ ಈ ರಾಜಕಾರಣಿಗಳು, ಧಿಡೀರನೆ ಇನ್ನಿಲ್ಲದ ಕಾಳಜಿ ಈಗ ಉಕ್ಕಿರುವುದರ ಹಿಂದಿನ ಸ್ವಾರ್ಥವೇನು ಕುತಂತ್ರವೇನು ಎಂಬುದನ್ನೂ ಪ್ರಶ್ನಿಸಲೇಬೇಕಿದೆ. ದುರಂತ ಸಾವಿಗೀಡಾದ ಹೆಣ್ಣುಮಗಳ ಹೆಣದ ಮೇಲೆ ರಾಜಕಾರಣ ಮಾಡುವ ಇಂತಹ ಹೀನ ಮನಸ್ಥಿತಿಯನ್ನು ಕಟುವಾಗಿ ವಿರೋಧಿಸಲೇಬೇಕು ಮತ್ತು ತಿರಸ್ಕರಿಸಲೇಬೇಕಿದೆ ಎಂದು ಸಂಘಟನೆ ಹೇಳಿದೆ.

ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳಾದಾಗ ಸದಾಕಾಲ ಸ್ಪಂದಿಸುವ, ನೊಂದವರ ಪರವಾಗಿ ಹೋರಾಡುವ, ನ್ಯಾಯವನ್ನು ದಕ್ಕಿಸಿಕೊಳ್ಳಲು ರಾಜಿರಹಿತ ನಿಸ್ವಾರ್ಥ ಪ್ರಯತ್ನ ನಡೆಸುವವರು ನಾಡಿನ ಮಹಿಳಾ ಸಂಘಟನೆಗಳು, ಸಾಮಾಜಿಕ ಕಳಕಳಿಯುಳ್ಳವರು ಮತ್ತು ಪ್ರಜ್ಞಾವಂತ ನಾಗರೀಕರೇ ಆಗಿದ್ದಾರೆ. ಇಂದಿಗೂ ನಿಜವಾದ ನ್ಯಾಯಕ್ಕಾಗಿ ಗುರಿಮುಟ್ಟುವವರೆಗೆ ಹೋರಾಡಬೇಕಾದ ಜವಾಬ್ದಾರಿಯೂ ನಮ್ಮ ಮೇಲಿದೆ ಎಂದು ಹೇಳಿರುವ ʻಎದ್ದೇಳು ಕರ್ನಾಟಕʼ ತಂಡ ಕೆಲವು ಘಟನೆಗಳನ್ನು ಮತ್ತು ಅದಕ್ಕೆ ಆಗಬೇಕಾದ ಕ್ರಮಗಳನ್ನು ಇಲ್ಲಿ ದಾಖಲಿಸಿದೆ.

ಘಟನೆ 1: ಹುಬ್ಬಳ್ಳಿಯಲ್ಲಿ ಫಯಾಜ್ ಎಂಬ ಯುವಕನೊಬ್ಬ ನೇಹಾ ಎಂಬ ಯುವತಿಯೊಂದಿಗೆ ಸ್ನೇಹ ಹೊಂದಿದ್ದ. ಅದನ್ನು ಮುಂದುವರೆಸುವಂತೆ ಅಥವಾ ಮದುವೆಯಾಗುವಂತೆ ಆಕೆಯನ್ನು ಒತ್ತಾಯಿಸಿದ್ದಾನೆ. ಆಕೆ ಒಪ್ಪದಿದ್ದಾಗ ಬಿಬಿಎ ಕಾಲೇಜಿನ ಆವರಣದಲ್ಲಿ ಚೂರಿ ಇರಿದು ಭೀಕರವಾಗಿ ಕೊಂದಿದ್ದಾನೆ. ಆ ದುಷ್ಟನನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆಯ ನಂತರ ಯುವಕನ ಕುಟುಂಬ ಯುವತಿಯ ಕುಟುಂಬದ ಕ್ಷಮೆ ಕೇಳಿದೆ, ತಮ್ಮಮಗನಿಗೆ ಕಠಿಣ ಶಿಕ್ಷೆಯಾಗಲಿ ಎಂದು ಆಗ್ರಹಿಸಿದೆ. ಜಿಲ್ಲೆಯ ಎಲ್ಲ ಮಾನವತಾವಾದಿಗಳೂ, ಮುಸ್ಲಿಮ್ ಬಾಂಧವರೂ ಘಟನೆಯನ್ನು ಕಟುವಾಗಿ ವಿರೋಧಿಸಿ, ಕ್ರಮಕ್ಕಾಗಿ ಆಗ್ರಹಿಸಿದ್ದಾರೆ.

ಆದರೆ, ಈ ಘಟನೆ ಯುವತಿಯ ಮೇಲಿನ ದೌರ್ಜನ್ಯ ಕಾರಣಕ್ಕಾಗಿಯಲ್ಲದೆ ಇನ್ನಿತರ ರಾಜಕೀಯ ಕಾರಣಗಳಿಗಾಗಿ ಸುದ್ದಿಯಾಗುತ್ತಿರುವಾಗಲೇ, ಇದರ ಹಿಂದೆ ಇಂತಹ ಹಲವು ಪ್ರಕರಣಗಳು ನಡೆದದ್ದು, ಅಂತಹ ಸಂದರ್ಭಗಳಲ್ಲಿ ಸಮಾಜವಾಗಲೀ, ಮಾಧ್ಯಮಗಳಾಗಲೀ, ಸರ್ಕಾರಗಳಾಗಲೀ ಗಂಭೀರ ಪ್ರತಿಕ್ರಿಯೆ ಕೊಡದೇ ಹೋದದ್ದು, ಇಂತಹವು ಹೆಚ್ಚುತ್ತಲೇ ಹೋಗುವುದಕ್ಕೂ ಕಾರಣವಾಗಿವೆ ಎಂಬುದನ್ನು ಮರೆಯಲು ಸಾಧ್ಯವಿಲ್ಲ.

ಘಟನೆ 2: ಬಂಟ್ವಾಳದ ಒಬ್ಬ ಯುವತಿ ಪದ್ಮರಾಜನೆಂಬ ಬಿಜೆಪಿ ಕಾರ್ಯಕರ್ತನನ್ನು ಪ್ರೀತಿಸಿದ್ದಳು. ಅವನಿಗೆ 2 ಲಕ್ಷ ಹಣ ಸಹ ಕೊಟ್ಟಿದ್ದಳು. ಆದರೆ ಆತ ಮದುವೆಯಾಗಲು ನಿರಾಕರಿಸಿದ್ದ. ಯುವತಿ ಮದುವೆಯಾಗು ಎಂದು ಪದೇ ಪದೇ ಒತ್ತಾಯಿಸಿದ್ದಕ್ಕೆ ಕ್ರೋಧಗೊಂಡ ಪದ್ಮರಾಜ್ ಆಕೆಗೆ ಹಾಡುಹಗಲೇ ಚೂರಿ ಇರಿದು ಕೊಂದು ಹಾಕಿದ.

ಘಟನೆ 3: ಮೈಸೂರಿನ ಮೇಟಗಳ್ಳಿ ಪೇಂಟ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ರುಕ್ಸಾನ ಎಂಬ ಮುಸ್ಲಿಂ ಯುವತಿಯನ್ನು ಅಲ್ಲಿಯೇ ಕೆಲಸ ಮಾಡುತ್ತಿದ್ದ ಪ್ರದೀಪ್ ನಾಯಕ್ ಪ್ರೀತಿಸುವ ನಾಟಕವಾಡಿ ಗರ್ಭಿಣಿ ಮಾಡಿದ್ದ. ಆನಂತರ ನನಗೆ ಈಗಾಗಲೇ ಮದುವೆಯಾಗಿದೆ, ನಿನ್ನನ್ನು ಮದುವೆಯಾಗಲು ಸಾಧ್ಯವಿಲ್ಲ ಎಂದು ಗದರಿದ್ದ. ಆದರೆ ರುಕ್ಸಾನ ಪಟ್ಟು ಬಿಡದಿದ್ದರಿಂದ ಕಡೂರಿನಲ್ಲಿ ರೂಂ ಮಾಡಿ ಇರಿಸಿ, ಹಾಸನದಲ್ಲಿ ಮಗು ಹುಟ್ಟಿತ್ತು. ಇದು ತನಗೆ ಮುಂದೆ ತೊಂದರೆಯಾಗುತ್ತದೆ ಎಂದು ಭಾವಿಸಿ ಏಪ್ರಿಲ್ 1ರ ತುಮಕೂರಿನ ದೊಡ್ಡಗುಣಿ ಹತ್ತಿರ ರುಕ್ಸಾನಳನ್ನು ಟವೆಲ್ನಿಂದ ಕತ್ತು ಹಿಸುಕಿ ಕೊಂದು, ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ. ಮಗುವನ್ನು ನೆಲಮಂಗಲದ ಹತ್ತಿರ ಬಿಸಾಡಿದ್ದ. ಟೋಲ್ ಸಿಸಿಟಿವಿ ಕ್ಯಾಮರಗಳ ಸಹಾಯದಿಂದ ಆರೋಪಿಯನ್ನು ಪತ್ತೆ ಹಚ್ಚಿದ ಪೊಲೀಸರು ಬಂಧಿಸಿದ್ದಾರೆ.

ಘಟನೆ 4 : ಕಲಬುರ್ಗಿಯಲ್ಲಿ ಇಬ್ಬರು ದಲಿತ ಕೂಲಿ ಕಾರ್ಮಿಕ ಹೆಣ್ಣುಮಕ್ಕಳಾದ ಚಂದಮ್ಮ, ಶರಣಮ್ಮ ಎಂಬುವವರನ್ನು ಕಟ್ಟಡ ಕೆಲಸಕ್ಕೆಂದು ಕರೆದೊಯ್ಯಲಾಗಿತ್ತು, ಆದರೆ ಎಂದಿನಂತೆ ಕೆಲಸ ಮುಗಿದ ನಂತರ ಇಬ್ಬರು ಹೆಣ್ಣುಮಕ್ಕಳು ಮನೆಗೆ ಮರಳಿಲ್ಲ. ನಂತರ ಹುಡುಕಾಡಿದಾಗ ತಾವರೆಗೇರ ಕ್ರಾಸ್ ಎಂಬಲ್ಲಿ ಅವರಿಬ್ಬರನ್ನೂ ಬರ್ಬರವಾಗಿ ಕೊಲೆ ಮಾಡಲಾಗಿದ್ದು ಗಮನಕ್ಕೆ ಬಂದಿದೆ. ಆರೋಪಿಯ ಬಂಧನ ಇನ್ನೂ ಆಗಿಲ್ಲ, ತನಿಖೆ ವೇಗ ಪಡೆಯುತ್ತಲೂ ಇಲ್ಲ. ದಲಿತ ಹೆಣ್ಣುಮಕ್ಕಳ ಮೇಲಾದ ಈ ದೌರ್ಜನ್ಯದ ಘಟನೆ ಯಾವುದೇ ದೊಡ್ಡ ಟಿವಿ ಮಾಧ್ಯಮಗಳಿಗಾಗಲೀ, ಸಮಾಜಕ್ಕಾಗಲೀ ಮುಖ್ಯವೆಂದು ಅನಿಸಲೇ ಇಲ್ಲ.

ಘಟನೆ 5: ಹೋದವರ್ಷ ಉಡುಪಿಯ ನೇಜಾರುವಿನಲ್ಲಿ ಹೆಣ್ಣುಮಕ್ಕಳನ್ನೂ ಒಳಗೊಂಡಂತೆ ಒಂದೇ ಕುಟುಂಬದ ನಾಲ್ಕು ಮಂದಿಯನ್ನು ಪ್ರವೀಣ್ ಚೌಗಲೆ ಎಂಬಾತ ಅತ್ಯಂತ ಕ್ರೂರವಾಗಿ ಹತ್ಯೆ ಮಾಡಿದ ಪ್ರಕರಣ ಗಮನಕ್ಕೇ ಬರದಂತೆ ಮರೆಯಾಗಿದೆ.

ಘಟನೆ 6: ಕೊಪ್ಪಳ ಜಿಲ್ಲೆಯ ಕಿನ್ನಾಳ ಗ್ರಾಮದಲ್ಲಿ ಕಳೆದ ಕೆಲವು ದಿನಗಳಿಂದ ಕಾಣೆಯಾಗಿದ್ದ 7 ವರ್ಷದ ಹೆಣ್ಣುಮಗು ನಿನ್ನೆ ಹೆಣವಾಗಿ ಪತ್ತೆಯಾಗಿದೆ. ಎಳೆಯ ಮಗುವನ್ನು ಕೊಚ್ಚಿ ತುಂಡುತುಂಡು ಮಾಡಿ ಚೀಲದಲ್ಲಿ ತುಂಬಿಟ್ಟದ್ದು ಪತ್ತೆಯಾಗಿದೆ. ಹಲವು ದಿನಗಳಿಂದ ಕೊಳೆತು ವಾಸನೆ ಬೀರುತ್ತಿದ್ದ ಮಗುವಿನ ಕಳೇಬರವು, ಅಮಾಯಕ ಹೆಣ್ಣುಮಗುವನ್ನು ಈ ಸ್ಥಿತಿಗೆ ತಲುಪಿಸಿದ ವಿಕೃತ ಮನಸ್ಥಿತಿ ಎಂಥದ್ದಿರಬಹುದೆಂಬುದು ಮೈನಡುಗಿಸುತ್ತಿದೆ.

ಘಟನೆ 7: ಇದೇ ಕೊಪ್ಪಳದಲ್ಲಿ ಎಸ್ಎಸ್ಎಲ್ಸಿ ಓದುತ್ತಿದ್ದ ದಲಿತ ವಿದ್ಯಾರ್ಥಿನಿಯೊಬ್ಬಳು ಪರೀಕ್ಷೆ ಬರೆದು ಬಂದ ತಕ್ಷಣವೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮೇಲ್ಜಾತಿಯ ಯುವಕನೊಬ್ಬನಿಂದ ನಿರಂತರವಾಗಿ ಲೈಂಗಿಕ ಕಿರುಕುಳಕ್ಕೆ ಗುರಿಯಾಗಿದ್ದಳೆಂದು ಹೇಳಲಾಗಿದೆ. ಪ್ರಕರಣ ದಾಖಲಾಗಿದ್ದು ಆರೋಪಿಯನ್ನು ಬಂಧಿಸಲಾಗಿದೆ. ಆದರೆ ಇದು ಸಮಾಜದ ಗಮನಕ್ಕೂ ಬಂದಂತಿಲ್ಲ ಮತ್ತು ತನಿಖೆ ವೇಗ ಪಡೆಯುತ್ತಿಲ್ಲ.
ಇವುಗಳಲ್ಲದೆ, ಇನ್ನೂ ಗಮನಕ್ಕೆ ಬಾರದಿರುವ, ದಾಖಲಾಗದಿರುವ, ಸುದ್ದಿಯಾಗದಿರುವ ಅದೆಷ್ಟೋ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಇದೇ ಸಮಯದಲ್ಲಿ ನಡೆದಿರಬಹುದು. ಆದರೆ, ಗಮನಕ್ಕೆ ಬಂದವುಗಳಿಗಾದರೂ ಖಂಡನೆ ವ್ಯಕ್ತಪಡಿಸುವುದು, ತುರ್ತಾಗಿ ಸೂಕ್ತ ಕಾನೂನು ಕ್ರಮಕ್ಕಾಗಿ ಆಗ್ರಹಿಸುವುದು, ನೊಂದವರಿಗೆ ಸ್ಪಂದಿಸುವುದು ಮತ್ತು ಮುಂದೆ ಇಂತಹವು ನಿಯಂತ್ರಣಕ್ಕೆ ಬರುವಂತೆ ಎಲ್ಲ ರೀತಿಯಲ್ಲೂ ಪ್ರಯತ್ನಿಸುವುದು ಸಾಮಾಜಿಕ ಜವಾಬ್ದಾರಿಯುಳ್ಳ ನಾಗರೀಕರಾದ ನಮ್ಮ ಕರ್ತವ್ಯ ಎಂದು ಭಾವಿಸಿ ಇವುಗಳನ್ನು ಇಲ್ಲಿ ದಾಖಲಿಸಲಾಗುತ್ತಿದೆ ಎಂದು ಸಂಘಟನೆ ಹೇಳಿದೆ.

ಈ ಎಲ್ಲ ಘಟನೆಗಳಲ್ಲಿ ಮತ್ತು ಇಲ್ಲಿ ದಾಖಲಾಗದೆ ಹೋಗಿರಬಹುದಾದ ಇಂತಹ ಇನ್ನಿತರ ಪ್ರಕರಣಗಳಲ್ಲಿ, ಹೆಣ್ಣು ಮಕ್ಕಳು ಸಂತ್ರಸ್ತರು. ತಾನು ಗಂಡಸು ಎಂಬ ಅಹಂನಿಂದ ಆರೋಪಿಗಳು ಕೊನೆಯಿಲ್ಲದ ಕೌರ್ಯ ಪ್ರದರ್ಶಿಸಿದ್ದಾರೆ, ಘೋರ ಅಪರಾಧ ಎಸಗಿದ್ದಾರೆ. ಅವರ ಕ್ರೂರವಾದ ದಾಳಿಗಳು ಅಕ್ಷಮ್ಯ. ಅವರಿಗೆ ಗರಿಷ್ಟ ಶಿಕ್ಷೆ ನೀಡಿ, ಇಂತಹ ಕೃತ್ಯಗಳು ಆಗದಂತೆ ತಡೆಯಬೇಕಿರುವುದು ಸರ್ಕಾರದ, ಪೊಲೀಸರ ಮತ್ತು ನ್ಯಾಯಾಂಗ ವ್ಯವಸ್ಥೆಯ ಕರ್ತವ್ಯ.

ಜೊತೆಗೆ, ನಾಗರಿಕ ಸಮಾಜದ ಇದರಲ್ಲಿ ಗಂಭೀರವಾದುದೇ ಆಗಿದೆ. ಇಂತಹ ವಿಕೃತ ಮನಸ್ಥಿತಿಯು ನಮ್ಮ ಸಮಾಜದಲ್ಲಿ ರೂಪುಗೊಳ್ಳುತ್ತಿರುವುದಾದರೂ ಏಕೆ, ಹೇಗೆ ಎಂಬ ಪ್ರಶ್ನೆಗಳಿಗೆ ನಮ್ಮ ಸಮಾಜ ಮತ್ತು ಕುಟುಂಬಗಳು ಉತ್ತರ ಕಂಡುಕೊಳ್ಳಲೇಬೇಕಿದೆ. ಹೆಣ್ಣುಮಕ್ಕಳು ತಮ್ಮ ಕೈಹಿಡಿತದಲ್ಲಿರಬೇಕಾದ, ಸ್ವತಂತ್ರ ಅಸ್ತಿತ್ವವಿಲ್ಲದ, ಎರಡನೇ ದರ್ಜೆಯ ಜೀವಿಗಳೆಂಬ ತಪ್ಪುತಿಳುವಳಿಕೆ ಶತಮಾನಗಳು ಕಳೆದರೂ ತೊಳೆದು ಹೋಗುತ್ತಿಲ್ಲವೇಕೆ ಎಂಬುದನ್ನು ಆಳವಾಗಿ ಅವಲೋಕಿಸಿ, ಪರಿಹಾರ ಕಂಡುಕೊಳ್ಳದಿದ್ದರೆ ಗಂಭೀರವಾದ ಮಾನವತೆಯ ಸಂಘರ್ಷದಲ್ಲಿ ಸಮಾಜ ಸಿಲುಕುವುದರಲ್ಲಿ ಅನುಮಾನವೇ ಇಲ್ಲ.

ಇಂತಹ ಪ್ರಕರಣಗಳ ಹಿನ್ನೆಲೆಯಲ್ಲಿ ಅನೇಕ ಸಂಕೀರ್ಣತೆಗಳೂ ಕೂಡಾ ಇವೆ. ಈ ಎಲ್ಲ ಹೆಣ್ಣುಮಕ್ಕಳೂ ಅನ್ಯಾಯವಾಗಿ ತಮ್ಮ ಪ್ರಾಣವನ್ನು ಅಥವಾ ಬದುಕನ್ನು ಕಳೆದುಕೊಂಡಿದ್ದಾರೆ, ಅವರ ಕುಟುಂಬಗಳು ಅಪಾರವಾದ ನೋವನ್ನನುಭವಿಸಿವೆ, ಈ ನೋವಿನಲ್ಲಿ ಅವರಿವರೆಂಬ ಭೇಧವಿಲ್ಲ, ಎಲ್ಲ ಹೆಣ್ಣುಮಕ್ಕಳಿಗೂ ನ್ಯಾಯ ಸಿಗಲೇಬೇಕು. ಅವರ ನೋವಿಗೆ ಪರಿಹಾರವೆಂದರೆ ಸೂಕ್ತವಾದ ಶಿಕ್ಷೆ ಮತ್ತು ರಾಜಿಯಿಲ್ಲದ ಕಾನೂನು ಕ್ರಮ. ಇದಕ್ಕಾಗಿ ನಾವು ಆಗ್ರಹಿಸಲೇಬೇಕು.

ಅದೇ ಸಮಯದಲ್ಲಿ, ದೌರ್ಜನ್ಯಕ್ಕೊಳಗಾದದ್ದು ಸಮಾಜದ ಬಲಾಢ್ಯ ವರ್ಗಗಳ ಹೆಣ್ಣುಮಕ್ಕಳಾದರೆ ಅದಕ್ಕೆ ದೊರೆಯುವ ಸ್ಪಂದನೆ ಮತ್ತು ಕ್ರಮದ ಭರವಸೆಯು ದಲಿತ, ದಮನಿತ, ದುರ್ಬಲ ವರ್ಗಗಳ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳ ಸಂದರ್ಭಗಳಲ್ಲಿ ಕಾಣುತ್ತಿಲ್ಲವೆಂಬ ದುರಂತವನ್ನು ನಾವು ಕಡೆಗಣಿಸಲು ಸಾಧ್ಯವೇ ಇಲ್ಲ. ಇಂತಹ ವಿಚಾರಗಳಲ್ಲಿ ಆ ಸೂಕ್ಷ್ಮ ಸಂವೇದನೆಯನ್ನು ಸರ್ಕಾರಗಳು ಮತ್ತು ಸಮಾಜಗಳು ಗಳಿಸಲೇಬೇಕಾದ ತುರ್ತು ಸನ್ನಿವೇಶ ಇಂದು ಬಂದೊದಗಿದೆ.

ಹುಬ್ಬಳ್ಳಿಯ ನೇಹಾ ಪ್ರಕರಣದ ದುರಂತ ಮತ್ತು ಆ ಘಟನೆಯ ಕ್ರೌರ್ಯ ನಮ್ಮೆಲ್ಲರ ಮನಸ್ಸನ್ನೂ ಕಲಕಿ, ಅಪಾರವಾದ ಆತಂಕ ತಂದಿದೆ. ಇಲ್ಲಿ, ಪ್ರಕರಣದಿಂದಾದ ಆತಂಕದ ಜೊತೆಗೆ ಮತ್ತೂ ಒಂದು ನಕಾರಾತ್ಮಕ ಬೆಳವಣಿಗೆಯ ಕಾರಣಕ್ಕೂ ಆತಂಕ ಹೆಚ್ಚಿದೆ. ಈ ಘಟನೆಗೆ ಮರುಗುವ, ಅದರಲ್ಲಿ ನ್ಯಾಯಕ್ಕಾಗಿ ಹೋರಾಡುವ ಮನೋಭಾವದ ಬದಲು, ಈ ಇಡೀ ಪ್ರಕರಣಕ್ಕೆ ರಾಜಕೀಯ ರಂಗು ಬಳಿದು, ಇದನ್ನು ಎರಡು ಧರ್ಮಗಳ ನಡುವಿನ ಗಲಭೆಯನ್ನಾಗಿ ಪರಿವರ್ತಿಸಲು ನಡೆಯುತ್ತಿರುವ ಹುನ್ನಾರ ಸ್ಪಷ್ಟವಾಗಿ ಗಮನಕ್ಕೆ ಬರುತ್ತಿದೆ. ಆರೋಪಿಯ ಧರ್ಮವನ್ನು ಮುಂದಿಟ್ಟುಕೊಂಡು ಸಮಾಜದ ಒಂದಷ್ಟು ವಿಭಾಗವು ಇಡೀ ಪ್ರಕರಣದ ಗಂಭೀರತೆಯೇ ಕಾಣೆಯಾಗುವಂತೆ, ಇದನ್ನೊಂದು ಕೋಮುವಿಷಯವನ್ನಾಗಿ ಪರಿವರ್ತಿಸಲು ಪ್ರಯತ್ನಿಸುತ್ತಿರುವುದು ಅಪಾರವಾದ ನೋವನ್ನು ತರುತ್ತಿದೆ. ಹೆಣ್ಣುಮಕ್ಕಳ ಬದುಕು ಮತ್ತು ಸಾವುಗಳೆಲ್ಲವೂ ಹೀಗೆ ಇನ್ಯಾರದೋ ಕೈಯ್ಯಲ್ಲಿ ನಡೆಯುವ ಆಟವಾಗಬೇಕೆ ಎಂಬ ಗಾಢವಾದ ಕೊರಗು ಕಾಡುತ್ತಿದೆ.

ಇಂತಹ ಅನಪೇಕ್ಷಿತ ಬೆಳವಣಿಗೆಗಳು ಸಮಾಜದ ಆರೋಗ್ಯಕ್ಕೆ ಒಳ್ಳೆಯದಲ್ಲ, ಅಪರಾಧಿಗಳು ಯಾವುದೇ ಜಾತಿ-ಧರ್ಮಗಳಿಗೆ ಸೇರಿದ್ದರೂ ಅವರು ಅಪರಾಧಿಗಳಷ್ಟೇ. ಮಾನವತೆಯ ಮೇಲಿನ ದಾಳಿಯಲ್ಲಿ ಧರ್ಮವೆಲ್ಲಿದೆ? ಬಸವಣ್ಣನವರು ಹೇಳುವಂತೆ ‘ದಯೇಯೇ ಧರ್ಮದ ಮೂಲ’ ಎಂದಾದರೆ, ಇಂತಹ ಪ್ರಕರಣಗಳಲ್ಲಿ ದಯೆಯೆಲ್ಲಿದೆ? ಆದ್ದರಿಂದ, ಮಹಿಳಾ ಸಮುದಾಯದ ಮೇಲೆ ನಡೆಯುತ್ತಿರುವ ಇಂತಹ ಘೋರವಾದ ದಾಳಿಗಳನ್ನು ರಾಜಕೀಯ ಉದ್ದೇಶಗಳಿಗೆ ದುರ್ಬಳಕೆ ಮಾಡಿಕೊಂಡು ತಮ್ಮ ಸ್ವಾರ್ಥ ಸಾಧನೆಗೆ ಪ್ರಯತ್ನಿಸುವ ಸಮಾಜವಿರೋಧಿ ಶಕ್ತಿಗಳನ್ನು ಕಟುವಾಗಿ ಖಂಡಿಸುವ ಅಗತ್ಯವಿದೆ. ನೊಂದ ಹೆಣ್ಣುಮಕ್ಕಳ ಕುಟುಂಬಗಳು ಮತ್ತು ಸಮಾಜದ ನಿಜವಾದ ಕಾಳಜಿಪರರು ಇಂತಹ ದುಷ್ಟಶಕ್ತಿಗಳನ್ನು ಹೊರಗಿಟ್ಟು, ಮಹಿಳೆಯರಿಗೆ ನಿಜವಾದ ನ್ಯಾಯ ಮತ್ತು ಮುಂದಿನ ಸಂದರ್ಭಗಳಲ್ಲಿ ಘಟನೆಗಳು ನಡೆಯದಂತೆ ತಡೆಯುವ ಅರಿವಿನ ಕ್ರಮಗಳಿಗಾಗಿ ಒತ್ತಾಯಿಸಿ ರಾಜಿರಹಿತವಾಗಿ ತೀವ್ರ ಹೋರಾಟ ನಡೆಸುವುದು ಇಂದಿನ ಮಟ್ಟಿಗೆ ಅತ್ಯಗತ್ಯವಾಗಿದೆ ಎಂದು ಎದ್ದೇಳು ಕರ್ನಾಟಕ ಸಂಘಟನೆ ತಿಳಿಸಿದೆ.

ʻಎದ್ದೇಳು ಕರ್ನಾಟಕʼದ ಹಕ್ಕೊತ್ತಾಯಗಳು ಈ ಕೆಳಕಂಡಂತಿವೆ:

  • ಹುಬ್ಬಳ್ಳಿಯ ಮನಃಕಲಕುವ ಘಟನೆಯ ವಿಚಾರಣೆಯನ್ನು ಮತ್ತು ಅದೇ ರೀತಿ ಈ ಎಲ್ಲ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳ ತನಿಖೆಯನ್ನು ವೇಗಗೊಳಿಸಿ ಬೇಗನೇ ಶಿಕ್ಷೆಯಾಗುವಂತೆ ಖಾತ್ರಿಪಡಿಸಬೇಕು. ತನಿಖೆಗಳು ಅತ್ಯಂತ ನಿಷ್ಪಕ್ಷಪಾತವಾಗಿ, ಚುರುಕಾಗಿ ಮತ್ತು ಮಹಿಳಾಪರವಾಗಿ ನಡೆಯಲು ಸಾಧ್ಯವಾಗುವಂತಯೆ ಕ್ರಮಗಳನ್ನು ಕೈಗೊಂಡು, ಸರ್ಕಾರವು ಈ ವಿಷಯಗಳಲ್ಲಿ ವಿಶೇಷ ಎಚ್ಚರಿಕೆ ಮತ್ತು ಕಾಳಜಿ ಪ್ರದರ್ಶಿಬೇಕು.
  • ನ್ಯಾಯದಾನ ಪ್ರಕ್ರಿಯೆಯನ್ನು ಬಿಗಿಗೊಳಿಸುವುದರಿಂದ ಮಹಿಳೆಯರ ಮೇಲಿನ ದೌರ್ಜನ್ಯ ನಡೆಸುವ ಮನಸ್ಥಿತಿ ಇರುವವರಲ್ಲಿ ಭಯ ಹುಟ್ಟಿಸಬಹುದು ಮತ್ತು ಘಟನೆಗಳ ಸಂಖ್ಯೆಯನ್ನು ನಿಯಂತ್ರಿಸಬಹುದು. ಅತ್ಯಾಚಾರ ಮತ್ತು ಹೆಣ್ಣುಮಕ್ಕಳ ಮೇಲಿನ ಹಿಂಸಾಚಾರದ ಪ್ರಕರಣಗಳ ತನಿಖೆ, ಸಾಕ್ಷಿ ಸಂಗ್ರಹ ಮತ್ತು ವಿಚಾರಣೆಯ ಪ್ರತಿ ಹಂತವನ್ನೂ ಅತ್ಯಂತ ಗಂಭೀರತೆಯಿಂದ, ಸಂತ್ರಸ್ತ ಮಹಿಳೆಯ ಪರವಾದ ಸಹಾನುಭೂತಿಯಿಂದ ನಡೆಸಿದರೆ, ಆರೋಪಿಗಳು ಬಿಡುಗಡೆಯಾಗಿ ಹೋಗಿ ಮತ್ತೆ ಇನ್ನಷ್ಟು ದೌರ್ಜನ್ಯಗಳನ್ನು ನಡೆಸಲು ಸಾಧ್ಯವಾಗುವುದಿಲ್ಲ.
  • ಅದೇ ರೀತಿ ಈ ಅವಧಿಯಲ್ಲಿ ಹೆಣ್ಣುಮಕ್ಕಳ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ ಪ್ರಕರಣಗಳ ಸಮಗ್ರ ತನಿಖೆ ಮತ್ತು ನಿಯಂತ್ರಣ ಕ್ರಮಗಳ ವಿಷಯದಲ್ಲಿ ಉನ್ನತ ಮಟ್ಟದ ಸಮಿತಿಯನ್ನು ಈ ಕೂಡಲೇ ನೇಮಕ ಮಾಡಬೇಕು. ಸಮಿತಿಯು ರಾಜ್ಯಾದ್ಯಂತ ನಡೆದಿರುವ ಎಲ್ಲ ಪ್ರಕರಣಗಳ ಆಳವಾದ ವಿಶ್ಲೇಷಣೆ ನಡೆಸಿ, ಕೂಡಲೇ ಸರ್ಕಾರಕ್ಕೆ ಮತ್ತು ನ್ಯಾಯಾಯಲಯಗಳಿಗೆ ವರದಿ ನೀಡಬೇಕು.
  • ಕೆಲವು ಪ್ರಕರಣಗಳ ವಿಚಾರದಲ್ಲಿ, ಹೆಣ್ಣುಮಕ್ಕಳು ದುರಂತ ಅಂತ್ಯ ಕಾಣುವ ಮೊದಲೇ ದೂರು ನೀಡಿದಾಗ, ಸಂಬಂಧಪಟ್ಟ ನ್ಯಾಯದಾನ ಸಂಸ್ಥೆಗಲು ಸೂಕ್ತ ಕ್ರಮ ಕೈಗೊಳ್ಳದೆ ನಿರ್ಲಕ್ಯ್ಷ ವಹಿಸಿದ ವರದಿಗಳು ಮಾಧ್ಯಮಗಳಲ್ಲಿ ಪ್ರಕಟವಾಗಿವೆ. ಈ ಬಗ್ಗೆಯೂ ತನಿಖೆ ನಡೆಯಬೇಕು ಮತ್ತು ಮುಂದಿನ ದಿನಗಳಲ್ಲಿ ಇಂತಹ ದೂರುಗಳನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕೆಂಬ ಆದೇಶ ಮತ್ತು ಸೂಕ್ಷ್ಮತೆಯನ್ನು ಪೊಲೀಸ್ ಇಲಾಖೆಗೆ ನೀಡಬೇಕು.
  • ಇಂತಹ ಘಟನೆಗಳು ಎಲ್ಲ ಜಿಲ್ಲೆಗಳಲ್ಲೂ ವರದಿಯಾಗುತ್ತಲೇ ಇದೆ. ಆದ್ದರಿಂದ ಇವುಗಳ ವಿರುದ್ಧ ಎಲ್ಲ ಜಿಲ್ಲೆಗಳ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಕಾರ್ಯಪ್ರವೃತ್ತರಾಗುವ ಅಗತ್ಯವಿದೆ. ಈ ಘಟನೆಯಂತಹ ಪ್ರಕರಣಗಳು ಮರುಕಳಿಸದಂತೆ ಎಚ್ಚರಿಕೆಯಾಗಿ, ಸಾರ್ವಜನಿಕ ಸ್ಥಳಗಳಲ್ಲಿ ಎಚ್ಚರಿಕೆ ಫಲಕಗಳನ್ನು ಅಳವಡಿಸುವುದನ್ನು ಆದ್ಯತೆಯ ಮೇಲೆ ಮಾಡಬೇಕು. ಅದೇ ರೀತಿ ವ್ಯಾಪಕವಾದ ಸಾರ್ವಜನಿಕ ಅರಿವಿನ ಅಭಿಯಾನಗಳನ್ನು ಜಿಲ್ಲಾಡಳಿತಗಳು ಸಂಬಂಧಪಟ್ಟ ಇಲಾಖೆಗಳ ಮೂಲಕ ಕೈಗೆತ್ತಿಕೊಳ್ಳಬೇಕು.
  • ಮಹಿಳಾಪರ ಮತ್ತು ಸಾಮಾಜಿಕ ಸಂಘಟನೆಗಳೊಂದಿಗೆ ಸಮನ್ವಯದೊಂದಿಗೆ ರಾಜ್ಯಾದ್ಯಂತ ನಿರಂತರವಾಗಿ ಎಚ್ಚರಿಕೆ ಮತ್ತು ಅರಿವಿನ ಹತ್ತು ಹಲವು ಬಗೆಯ ಮುಂದಾಲೋಚನೆಯ ಕಾರ್ಯಕ್ರಮಗಳನ್ನು ಸರ್ಕಾರ ರೂಪಿಸಲೇಬೇಕು.
  • ನಾಗರೀಕ ಸಮಾಜವು ಈ ಪ್ರಕರಣಗಳಿಗೆ ಅತ್ಯಂತ ಗಂಭೀರವಾಗಿ, ಮಾನವೀಯತೆಯ ನೆಲೆಯಲ್ಲಿ ಸ್ಪಂದಿಸಬೇಕು. ನೇಹಾ ಪ್ರಕರಣದಂತಹ ಘಟನೆಗಳನ್ನು ಎಷ್ಟೇ ರಾಜಕೀಯಕರಣಗೊಳಿಸುವ ಪ್ರಯತ್ನ ನಡೆದಾಗಲೂ, ಮೂಲತಃ ಇದೊಂದು ಗಂಭೀರ ಸಾಮಾಜಿಕ ಸಮಸ್ಯೆ ಎಂಬುದನ್ನು ಸಮಾಜವು ಅರ್ಥಮಾಡಿಕೊಳ್ಳಲೇಬೇಕು. ಇದನ್ನು ತಡೆಯಬೇಕಾದರೆ ಸಮಾಜದಲ್ಲಿ ಬರಬೇಕಾದ, ತರಬೇಕಾದ ಬದಲಾವಣೆಗಳಿಗಾಗಿ ನಿರಂತರವಾಗಿ ಶ್ರಮಿಸಬೇಕು.
  • ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ರಾಜಕೀಯ ವಿಷಯವಾಗಿಸಿ ಸ್ವಾರ್ಥ ಸಾಧನೆಗೆ ಪ್ರಯತ್ನಿಸುವ ಶಕ್ತಿಗಳ ವಿರುದ್ಧ, ಸಮಾಜದ ಸ್ವಾಸ್ಥ್ಯವನ್ನು ಕೆಡಿಸಿ ಅಶಾಂತಿ ಮೂಡಿಸುವವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು.

ಈ ಮೇಲಿನ ಎಲ್ಲ ವಿಷಯಗಳಲ್ಲಿ ಜಿಲ್ಲಾಡಳಿತ ಮತ್ತು ಸರ್ಕಾರದೊಂದಿಗೆ ಶ್ರಮಿಸಲು ನಾವೆಲ್ಲರೂ ಸಿದ್ಧರಿದ್ದೇವೆ. ಕೂಡಲೇ ಸಕಾರಾತ್ಮಕವಾದ ಹೆಜ್ಜೆಗಳನ್ನು ಸರ್ಕಾರ ಮುಂದಿಡಬೇಕೆಂದು ಈ ಮೂಲಕ ನಾವೆಲ್ಲರೂ ಆಗ್ರಹಿಸುತ್ತಿದ್ದೇವೆ ಎಂದು ಸಂಘಟನೆ ತಿಳಿಸಿದೆ.

More articles

Latest article