ಕೊನೆಗೂ ಬರಪರಿಹಾರ ಹಣ ನೀಡಲು ಒಪ್ಪಿಕೊಂಡ ಕೇಂದ್ರ ಸರ್ಕಾರ: ಬರಪರಿಹಾರ ಕೊಟ್ಟಿದ್ದೇವೆ ಎಂದಿದ್ದ ಬಿಜೆಪಿ ನಾಯಕರಿಗೆ ಮುಖಭಂಗ

Most read

ಹೊಸದಿಲ್ಲಿ: ಕರ್ನಾಟಕಕ್ಕೆ ಬರ ಪರಿಹಾರ ನೀಡುವ ಸಂಬಂಧ ಚುನಾವಣಾ ಆಯೋಗ ಒಪ್ಪಿಗೆ ನೀಡಿದ್ದು, ಶೀಘ್ರದಲ್ಲೇ ಪರಿಹಾರ ಒದಗಿಸಲಾಗುವುದು ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ ಗೆ ತಿಳಿಸಿದೆ.

ನ್ಯಾಯಮೂರ್ತಿಗಳಾದ ಬಿ.ಆರ್.‌ ಗವಾಯಿ ಮತು ಸಂದೀಪ್‌ ಮೆಹ್ತಾ ಅವರನ್ನೊಳಗೊಂಡು ವಿಭಾಗೀಯ ಪೀಠದ ಮುಂದೆ ವಿಚಾಚರಣೆ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಅಟಾರ್ನಿ ಜನರಲ್‌ ಆರ್‌ ವೆಂಕಟರಮಣಿ ಈ ವಿಷಯವನ್ನು ತಿಳಿಸಿದರು.

ಈ ಸಂಬಂಧ ಕೆಲವು ಪ್ರಕ್ರಿಯೆಗಳು ಸೋಮವಾರ ನಡೆಯಲಿದೆ, ಈ ಹಿನ್ನೆಲೆಯಲ್ಲಿ ಈಗ ಯಾವುದೇ ವಾದಗಳು ಬೇಡ, ವಿಚಾರಣೆಯನ್ನು ಮುಂದಕ್ಕೆ ಹಾಕಿ ಎಂದು ಅವರು ನ್ಯಾಯಾಲಯವನ್ನು ವಿನಂತಿಸಿಕೊಂಡರು.

ಈ ಸಂದರ್ಭದಲ್ಲಿ ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ಹಿರಿಯ ನ್ಯಾಯವಾದಿ ಕಪಿಲ್‌ ಸಿಬಲ್‌ ಪ್ರಕರಣವನ್ನು ಮುಂದಕ್ಕೆ ಹಾಕುವುದಕ್ಕೆ ತಮ್ಮ ಅಭ್ಯಂತರವಿಲ್ಲ ಎಂದು ಹೇಳಿದರು.

ʻʻಇದು ಯಾವಾಗಲೂ ಸಹಮತದಿಂದ ನಡೆಯಬೇಕು, ನಮ್ಮದು ಒಕ್ಕೂಟ ವ್ಯವಸ್ಥೆʼʼ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.

ಕೇಂದ್ರ ಸರ್ಕಾರ ಬರಪೀಡಿತ ಕರ್ನಾಟಕ ರಾಜ್ಯಕ್ಕೆ ರಾಷ್ಟ್ರೀಯ ನೈಸರ್ಗಿಕ ವಿಪತ್ತು ನಿಧಿ ( NDRF ) ನಿಂದ ಹಣ ನೀಡುತ್ತಿಲ್ಲ ಎಂದು ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್‌ ಮೊರೆ ಹೋಗಿತ್ತು.

ಕೇಂದ್ರ ಸರ್ಕಾರದ ನಡೆಯಿಂದಾಗಿ ಕರ್ನಾಟಕದ ಜನತೆಯ ಮೂಲಭೂತ ಹಕ್ಕುಗಳಿಗೆ ಧಕ್ಕೆ ಬಂದಿದೆ. ಹೀಗಾಗಿ ಅನಿವಾರ್ಯವಾಗಿ ನ್ಯಾಯಾಲಯದ ಮೊರೆ ಬಂದಿರುವುದಾಗಿ ಕರ್ನಾಟಕ ಸರ್ಕಾರ ತಿಳಿಸಿತ್ತು. ಆರು ತಿಂಗಳಾದರೂ ಕೇಂದ್ರ ಸರ್ಕಾರದ ಹಲವು ಇಲಾಖೆಗಳ ಅಧಿಕಾರಿಗಳ ತಂಡ ನೀಡಿದ ವರದಿಗೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಲಾಗಿಲ್ಲ. NDRF ಹಣ ಬಾರದ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಪರಿಸ್ಥಿತಿ ಅತ್ಯಂತ ಶೋಚನೀಯವಾಗಿದೆ ಎಂದು ಅರ್ಜಿಯಲ್ಲಿ ಹೇಳಲಾಗಿತ್ತು.

ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಸಂಘರ್ಷದ ಸ್ಥಿತಿ ನೆಲೆಸಬಾರದು. ರಾಜ್ಯಗಳು ಪದೇಪದೇ ಸುಪ್ರೀಂ ಕೋರ್ಟಿಗೆ ಬರುವಂತಾಗಬಾರದು ಎಂದು ಹೇಳಿತ್ತು.

ಕೇಂದ್ರ ಸರ್ಕಾರದ ಅಟಾರ್ನಿ ಜನರಲ್‌ ಈ ಸಂಬಂಧ ಯಾವುದೇ ನೋಟಿಸ್‌ ನೀಡದಂತೆ ಬೇಡಿಕೊಂಡಿದ್ದರಲ್ಲದೆ, ಹದಿನೈದು ದಿನಗಳ ಕಾಲಾವಕಾಶ ಕೋರಿದ್ದರು. ಹದಿನೈದು ದಿನಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಇಂದು ಸುಪ್ರೀಂ ಕೋರ್ಟ್‌ ನಲ್ಲಿ ಮತ್ತೆ ವಿಚಾರಣೆ ನಡೆದು ಬರಪರಿಹಾರದ ಹಣ ನೀಡಲು ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ.

More articles

Latest article